ಬಿಳಿನೆಲೆ ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಚಲುವರಂಗಪ್ಪ, ಚೇತನ್, ಸುಧೀರ್ ಕುವಾರ್ ಶೆಟ್ಟಿ, ವಾಡ್ಯಪ್ಪ ಗೌಡ, ಚಂದ್ರಾವತಿ ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಬಿಳಿನೆಲೆ ಗ್ರಾಮ ಸೇರ್ಪಡೆಗೆ ಗ್ರಾಮಸ್ಥರ ವಿರೋಧ

ವಿಶೇಷ ಗ್ರಾಮಸಭೆ

ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯನ್ನು ಜಾರಿಗೊಳಿಸುವುದಕ್ಕೆ ಬಿಳಿನೆಲೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಬಿಳಿನೆಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಗ್ರಾಮದ ಕೃಷಿ, ಜಮೀನು, ಮನೆ ನಿರ್ವಾಣ ಹಾಗೂ ದುರಸ್ತಿ ಸೇರಿದಂತೆ ಗ್ರಾಮಸ್ಥರ ಹಲವು ಚಟುವಟಿಕೆಗಳ ಮೇಲೆ ನಿರ್ಬಂಧಗಳು ಎದುರಾಗುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.

ತಮ್ಮ ಜಮೀನು ಮತ್ತು ಜೀವನೋಪಾಯದ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರುವ ಪ್ರಸ್ತಾವನೆಯನ್ನು ಗ್ರಾಮಸ್ಥರು ಒಪ್ಪುವುದಿಲ್ಲ. ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಬಿಳಿನೆಲೆ ಗ್ರಾಮವನ್ನು ಒಳಪಡಿಸುದನ್ನು ಸಂಪೂರ್ಣವಾಗಿ ವಿರೋಧಿಸುವುದಾಗಿ ಗ್ರಾಮಸ್ಥರು ಒಕ್ಕೊರಲಿನಿಂದ ನಿರ್ಣಯಿಸಿದರು.

ಗ್ರಾಮಸ್ಥರ ಪರವಾಗಿ ಮಂಡಿಸಲಾದ ನಿರ್ಣಯದಲ್ಲಿ, ಕಸ್ತೂರಿರಂಗನ್ ವರದಿ ಆಧಾರಿತ ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಪರಿಸರ ಸೂಕ್ಷ್ಮವಲಯ ನಿಯಮಗಳನ್ನು ಬಿಳಿನೆಲೆ ಗ್ರಾಮದಲ್ಲಿ ಜಾರಿಗೊಳಿಸಬಾರದು. ಗ್ರಾಮಸ್ಥರ ಜಮೀನು, ಕೃಷಿ, ಮನೆ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಬಂಧಗಳನ್ನು ಹೇರಬಾರದು ಎಂದು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಸಲ್ಲಿಸಿ, ಬಿಳಿನೆಲೆ ಗ್ರಾಮವನ್ನು ವರದಿ ವ್ಯಾಪ್ತಿಯಿಂದ ಹೊರಗಿಡುವಂತೆ ಮನವಿ ವಾಡಲು ನಿರ್ಧರಿಸಲಾಯಿತು.

ಬಿಳಿನೆಲೆ ಗ್ರಾಪಂ ಆಡಳಿತಾಧಿಕಾರಿ ಚಲುವರಂಗಪ್ಪ, ಸುಬ್ರಹ್ಮಣ್ಯ ಆರ್‌ಎಫ್‌ಒ ಚೇತನ್, ಕಡಬ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುವಾರ್ ಶೆಟ್ಟಿ, ಕೃಷಿ ಪತ್ತಿನ ಸಹಕಾರ ಸಂದ ಅಧ್ಯಕ್ಷ ವಾಡ್ಯಪ್ಪ ಗೌಡ, ಪಿಡಿಒ ಚಂದ್ರಾವತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.