ಮಂಗಳೂರು: ಭಾರತ 2047ರ ಪರಿಕಲ್ಪನೆಯಲ್ಲಿ ಕಲಾವಿದರಾದ ವೀಣಾ ಐತಾಳ್ ಮತ್ತು ಸತೀಶ್ಚಂದ್ರ ಅವರು ನಿರಂತರ 48ಗಂಟೆಗಳ ಕಾಲ ಧಾನ್ಯ, ಹೂ, ರಂಗೋಲಿ ಹುಡಿಗಳಿಂದ ರಚಿಸಿದ 30 ಅಡಿ ಉದ್ದ ಹಾಗೂ 24 ಅಡಿ ಅಗಲದ ರಂಗೋಲಿ ವಿಶೇಷ ಆಕರ್ಷಣೆ ಪಡೆಯಿತು.
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಕೂಟಕ್ಕಳ ಸಭಾಭವನದಲ್ಲಿ ಶುಕ್ರವಾರ ಭಾರತೀಯ ಜನತಾ ಪಾರ್ಟಿ ದಕ್ಷಿಣ ಮಂಡಲದ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಈ ರಂಗೋಲಿ ರಚಿಸಲಾಗಿದೆ. 2047ರ ಭಾರತ ದೇಶದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿ, ಎಐ ಜಮಾನ, ಬಾಹ್ಯಾಕಾಶದ ಕ್ರಾಂತಿ ಎಲ್ಲವನ್ನೂ ನವೀರಾಗಿ ಚಿತ್ರಿಸಲಾಗಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೇಶದಲ್ಲಿ ಸ್ವಚ್ಛ ಭಾರತ್ ಕ್ರಾಂತಿ, ಡಿಜಿಟಲ್ ಕ್ರಾಂತಿ, ಕೃಷಿ , ಕೈಗಾರಿಕೆ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಾಕ್ರಾಂತಿಯೇ ಆಗಿದೆ. ಮಿಲಿಟರಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗಿದೆ. ದೇಶದ ಜಿಡಿಪಿ 8.72 ಗೆ ಜಿಗಿದಿರುವುದೇ ಇದಕ್ಕೆ ಸಾಕ್ಷಿ. ಮೋದಿ ಆಡಳಿತಕ್ಕೆ 25ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶಾದ್ಯಂತ ಸೇವಾ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರು ಹೇಳಿದರು.
ಬಿಜೆಪಿ ದಕ್ಷಿಣ ವಲಯ ಅಧ್ಯಕ್ಷ ರಮೇಶ್ ಕಂಡೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ಪೂರ್ಣಿಮಾ, ಸುಜಿತ್ ಪ್ರತಾಪ್, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಕೋಷ್ಠ ಸಂಚಾಲಕ ಸುಧೀರ್ ಶೆಟ್ಟಿ ಕಣ್ಣೂರು, ಮುಖಂಡರಾದ ಅಶ್ವಿತ್ ಕೊಟ್ಟಾರಿ, ಭಾಸ್ಕರ್‌ಚಂದ್ರ ಶೆಟ್ಟಿ, ವಸಂತ್ ಪೂಜಾರಿ, ವಿಜಯ ಕುಮಾರ್ ಶೆಟ್ಟಿ, ರಾಜೇಂದ್ರ ಉಪಸ್ಥಿತರಿದ್ದರು.
ರಂಗೋಲಿ ಬಿಡಿಸಿದ ಕಲಾವಿದರಾದ ವೀಣಾ ಐತಾಳ್ ಮತ್ತು ಸತೀಶ್ಚಂದ್ರ ಅವರನ್ನು ಅಭಿನಂದಿಸಲಾಯಿತು.
ರಮೇಶ್ ಹೆಗ್ಡೆ ಸ್ವಾಗತಿಸಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಕಾರ್ಯಕ್ರಮ ನಿರೂಪಿಸಿದರು.