ರಾಷ್ಟ್ರೀಯ ಹೆದ್ದಾರಿ 169ರ ರೋಸಾ ಮಿಸ್ತಿಕಾ ಶಾಲೆ ಸಮೀಪದ ವಿಕಾಸನಗರದಿಂದ ಕೈಕಂಬಕ್ಕೆ ಸಂಪರ್ಕ ಕಲ್ಪಿಸುವ ಅಭಿವೃದ್ಧಿ ಕಾಣದ ಕಚ್ಚಾ ರಸ್ತೆ. 
ದಕ್ಷಿಣ ಕನ್ನಡ

ಅಭಿವೃದ್ಧಿ ಕಾಣದ ವಿಕಾಸನಗರ ರಸ್ತೆ

ಕಾಂಕ್ರೀಟ್ ರಸ್ತೆಗಳ ನಡುವೆ ಕಚ್ಚಾ ಹಾದಿ

ವಿಜಯವಾಣಿ ಸುದ್ದಿಜಾಲ ಗುರುಪುರ

ರಾಷ್ಟ್ರೀಯ ಹೆದ್ದಾರಿ 169ರ ರೋಸಾ ಮಿಸ್ತಿಕಾ ಶಾಲೆ ಸಮೀಪದ ವಿಕಾಸನಗರದಿಂದ ಒಳಮಾರ್ಗವಾಗಿ ಕೈಕಂಬಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 40-50 ವರ್ಷಗಳ ಹಳೆಯ ಕಚ್ಚಾ ರಸ್ತೆ ಇಂದಿಗೂ ಅಭಿವೃದ್ಧಿ ಕಾಣದೆ ಉಳಿದಿದೆ.

ವಿಕಾಸನಗರದ ಮಟ್ಟಿಕುಲ ಮಾರ್ಗವಾಗಿ ಕೈಕಂಬ ಸಂಪರ್ಕಿಸುವ ಬಹುತೇಕ ಒಳರಸ್ತೆಗಳು ವಸತಿ ಬಡಾವಣೆಗಳ ನಿರ್ಮಾಣದೊಂದಿಗೆ ಕಾಂಕ್ರೀಟೀಕರಣಗೊಂಡಿವೆ. ಆದರೆ, ಹೆದ್ದಾರಿಯ ಎರಡು ಬದಿಗಳನ್ನು ಬೆಸೆಯುವ ಅತ್ಯಂತ ಹಳೆಯ ರಸ್ತೆಯ ಸುಮಾರು 320-350 ಮೀಟರ್ ವ್ಯಾಪ್ತಿಯ ಮಧ್ಯದ ಭಾಗ ಮಾತ್ರ ಮುರಕಲ್ಲಿನ ದಿಣ್ಣೆ ಮತ್ತು ಹೊಂಡ-ಗುಂಡಿಗಳಿಂದ ಕೂಡಿದೆ. ಸಂಬಂಧಪಟ್ಟ ಪಂಚಾಯಿತಿ ಹಾಗೂ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಅಳಲು.

ಪೈಪ್‌ಲೈನ್ ನೆಪ

ಈ ಕಚ್ಚಾ ರಸ್ತೆಯ ಒಂದು ಪಾರ್ಶ್ವದಲ್ಲಿ ಭೂಮಿಯೊಳಗೆ ಎಂಆರ್‌ಪಿಎಲ್‌ನ ಕಚ್ಚಾತೈಲ ಪೈಪ್‌ಲೈನ್ ಹಾಗೂ ಹೊರಭಾಗದಲ್ಲಿ ಎಚ್‌ಪಿಸಿಎಲ್‌ನ ಅನಿಲ ಪೈಪ್‌ಲೈನ್ ಹಾದುಹೋಗಿವೆ. ಇವೆರಡೂ ಸಾಕಷ್ಟು ಆಳದಲ್ಲಿದ್ದು, ಇದೇ ಪೈಪ್‌ಲೈನ್ ಹಾದುಹೋಗಿರುವ ಅಕ್ಕಪಕ್ಕದ ಇತರ ರಸ್ತೆಗಳು ಈಗಾಗಲೇ ಕಾಂಕ್ರೀಟೀಕರಣಗೊಂಡಿವೆ. ಹೀಗಿರುವಾಗ, ಈ ಸಣ್ಣ ಅಂತರದ ರಸ್ತೆಯನ್ನೂ ಸಮತಟ್ಟುಗೊಳಿಸಿ ಕಾಂಕ್ರೀಟ್ ಅಥವಾ ಡಾಂಬರೀಕರಣ ಮಾಡಲು ಸಾಧ್ಯವಿದೆ. ಇಲಾಖೆಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಮುಖ ಸಂಪರ್ಕ ಕೊಂಡಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾದಾಗ ಕೈಕಂಬ ತಲುಪಲು ವಾಹನ ಸವಾರರಿಗೆ ಇದುವೇ ಸಮೀಪದ ಪರ್ಯಾಯ ಮಾರ್ಗ. ಜತೆಗೆ ಈ ಭಾಗದ 100ಕ್ಕೂ ಹೆಚ್ಚು ಮನೆಗಳ ನಿವಾಸಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ದಿನನಿತ್ಯ ಕೈಕಂಬ ಮತ್ತು ಮಂಗಳೂರಿಗೆ ತೆರಳಲು ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಸುತ್ತಲೂ ನಗರೀಕರಣದ ವೇಗ ಹೆಚ್ಚುತ್ತಿದ್ದರೂ ಈ ಮುಖ್ಯ ಕೊಂಡಿ ಮಾತ್ರ ದುಃಸ್ಥಿತಿಯಲ್ಲೇ ಮುಂದುವರಿದಿದೆ.

ನಾವಿಲ್ಲಿ ನೆಲೆಯಾಗಿ 25 ವರ್ಷಗಳೇ ಕಳೆದಿವೆ. ರಸ್ತೆ ಅಂಚಿನಲ್ಲಿ 7 ಮೀಟರ್ ಆಳದಲ್ಲಿ ಎಂಆರ್‌ಪಿಎಲ್ ಹಾಗೂ ಎಚ್‌ಪಿಸಿಎಲ್ ಪೈಪ್‌ಲೈನ್‌ಗಳಿವೆ. 2-3 ಅಡಿ ಎತ್ತರ-ತಗ್ಗನ್ನು ಸಮತಟ್ಟುಗೊಳಿಸಿದರೆ ಸುಲಭವಾಗಿ ಕಾಂಕ್ರೀಟ್ ಹಾಕಬಹುದು. ಕಂಪನಿಗಳ ಅಗತ್ಯಕ್ಕೆ ಜಾಗ ಬಿಟ್ಟುಕೊಟ್ಟ ನಮಗೆ ಮೂಲಸೌಕರ್ಯವೇ ಇಲ್ಲದಂತಾಗಿದೆ. 350 ಮೀಟರ್ ರಸ್ತೆಗೆ ಕಂಪನಿಗಳ ನಿರಾಕ್ಷೇಕ್ಷಣಾ ಪತ್ರ ಬೇಕು ಎನ್ನಲಾಗುತ್ತಿದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿದರೆ ಈ ಸಮಸ್ಯೆ ಬಗೆಹರಿಸುವುದು ಕಷ್ಟವಲ್ಲ.
ಪಿಯೂಸ್ ಮಿರಾಂಡ, ಸ್ಥಳೀಯ ನಿವಾಸಿ
ನಮ್ಮ ಸುತ್ತಮುತ್ತಲಿನ ಎಲ್ಲ ಒಳರಸ್ತೆಗಳು ಕಾಂಕ್ರೀಟೀಕರಣಗೊಂಡಿದ್ದರೂ, ನಮ್ಮ ಮನೆಯ ಮುಂದಿನ ಹಳೆಯ ಕಚ್ಚಾ ರಸ್ತೆ ಮಾತ್ರ ಅಭಿವೃದ್ಧಿ ಕಂಡಿಲ್ಲ. ಪಂಚಾಯಿತಿ, ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನಹರಿಸಿ ಕಾಯಕಲ್ಪ ನೀಡಬೇಕು.
ಸುಂದರ ಆಚಾರ್ಯ ಸ್ಥಳೀಯ ನಿವಾಸಿ
ವಿಕಾಸನಗರದ ಕಚ್ಚಾ ರಸ್ತೆ ಅಭಿವೃದ್ಧಿಯಾಗಬೇಕಿರುವುದು ಅತ್ಯಗತ್ಯ. ಎಂಆರ್‌ಪಿಎಲ್ ಮತ್ತು ಎಚ್‌ಪಿಸಿಎಲ್‌ನಿಂದ ನಿರಾಕ್ಷೇಪಣಾ ಪತ್ರ ದೊರೆತರೂ ಕಾಮಗಾರಿಗೆ ಪ್ರತ್ಯೇಕ ಅನುದಾನದ ಅಗತ್ಯವಿದೆ. ಸದ್ಯದ ಹಂತದಲ್ಲಿ ಅಗತ್ಯ ಅನುದಾನ ಕ್ರೋಡೀಕರಿಸುವುದೇ ಮುಖ್ಯ ಸವಾಲಾಗಿದೆ.
ಡಾ.ಭರತ್ ಶೆಟ್ಟಿ, ಶಾಸಕ