ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಪ್ರಮುಖರಾದ ಗುರುರಾಜ್ ಗಂಟಿಹೊಳೆ, ವಿಜಯ ಶ್ಯಾಮ್, ಸುರೇಶ, ಮಹೇಶ ಕೆ.ಜಿ., ನಾಗಶಯನ, ರಾಜೇಶ್ ಉಪಸ್ಥಿತರಿದ್ದರು.  
ದಕ್ಷಿಣ ಕನ್ನಡ

ವಿಬಿ-ಜಿ ರಾಮ್ ಜಿ ಸಮಸ್ಯೆ ವರದಿ ಸಲ್ಲಿಸಿ

ಇಂದಿರಾ ಎನ್ ಕೆ

ವಿಜಯವಣಿ ಸುದ್ದಿಜಾಲ ಕುಂದಾಪುರ

ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಈ ಯೋಜನೆಯಲ್ಲಿ ನಿಯಮ ಬಿಗಿ ಮಾಡಿರುವುದು ಸೋರಿಕೆ ತಡೆಗಟ್ಟಲು, ಕೆಲಸ ನಿಲ್ಲಿಸಲು ಅಲ್ಲ. ರಾಜ್ಯದಲ್ಲಿ ಮಾಡಿದ ನಿಯಮ ಕರಾವಳಿ ಜಿಲ್ಲೆಗೆ ವ್ಯತ್ಯಾಸವಾಗುತ್ತದೆ. ನರೇಗಾದಲ್ಲಿ ಇಂತಹ ವ್ಯತ್ಯಾಸ ಗಮನಿಸಿ ಹೇಳಿದಾಗ ನರೇಗಾದಲ್ಲಿ ಬದಲಾವಣೆ ಮಾಡಲಾಗಿತ್ತು. ಹೀಗಾಗಿ ವಿಬಿ-ಜಿ ರಾಮ್ ಜಿ ಯೋಜನೆ ವ್ಯತ್ಯಾಸಗಳನ್ನು ತಕ್ಷಣಕ್ಕೆ ಪಿಡಿಒಗಳು ಗಮನಿಸಿ, ಇಒ ಗಮನಕ್ಕೆ ತಂದು ಇಒಗಳು ಇದನ್ನು ಪಟ್ಟಿಮಾಡಿ ಜಿಲ್ಲೆಗೆ ತಂದು, ನಮ್ಮ ಜಿಲ್ಲೆಗೆ ಇಂತಹ ಸಮಸ್ಯೆ ಆಗುತ್ತಿದೆ ಎಂಬುದರ ಬಗ್ಗೆ ಆದಷ್ಟು ಬೇಗ ವರದಿಯಾಗಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ ನೀಡಿದರು.
ಕುಂದಾಪುರದ ತಾಪಂ ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊಸ ಯೋಜನೆ ಬಂದ ಬಳಿಕ ಕ್ಷೇತ್ರದಲ್ಲಿ, ಗ್ರಾಪಂನಲ್ಲಿ ಅದರ ಉಪಯೋಗ ಪಡೆದುಕೊಳ್ಳಲು ಆಸ್ತಿ ನಿರ್ಮಾಣ ಮಾಡಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ಪಂಚಾಯಿತಿ ಮಟ್ಟದಲ್ಲಿ ನೀರಿನ ಸಮಸ್ಯೆಗೆ ಯೋಜನೆಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ನಮ್ಮ ಜಿಲ್ಲೆ ಮಟ್ಟಿಗೆ ಆಗಬೇಕಾದ ಮಾರ್ಪಾಡಿನ ಬಗ್ಗೆ ಬೇಡಿಕೆ ಸಲ್ಲಿಸಬೇಕು. ವಿಬಿ-ಜಿ ರಾಮ್ ಜಿಯಲ್ಲಿ ಕಾಮಗಾರಿಗಳ ಪಟ್ಟಿ ಹೆಚ್ಚಾಗಿದೆ, ದರವೂ ಹೆಚ್ಚಾಗಿದೆ. ಅದರೊಟ್ಟಿಗೆ ನಿರ್ಬಂಧವೂ ಹೆಚ್ಚಾಗಿದೆ ಎಂದರು.

ತಾಂತ್ರಿಕ ಸಮಸ್ಯೆ

ಈ ಯೋಜನೆಯಲ್ಲಿ ಸಾರ್ವಜನಿಕ ತೋಡಿನ ಕೆಲಸ ನಿರ್ವಹಿಸಲು ಆಗುವುದಿಲ್ಲ. ಚರಂಡಿ ನಿರ್ಮಿಸಲು ಅವಕಾಶ ಇದೆ. ಯೋಜನೆಯಡಿ ಇತರ ಇಲಾಖೆಗಳ ಕಾಮಗಾರಿ ಸೇರಿಸಿಕೊಂಡಿದ್ದು, ಎಂಬಿ ಬರೆಯುವುದು ಮತ್ತು ತಾಂತ್ರಿಕ ಮಂಜೂರಾತಿ ಸಂಬಂಧಪಟ್ಟ ಇಲಾಖೆಯವರು ನೀಡಿದರೂ ಹಣ ಪಾವತಿಸಲು ಪಿಡಿಒ/ಆಡಳಿತಾಧಿಕಾರಿಗಳನ್ನು ಹಾಕಿದ್ದಾರೆ. 7 ದಿನದೊಳಗೆ ಹಣ ಪಾವತಿ ಮಾಡಿದ್ದರೆ ವಿಳಂಬ ಪಾವತಿ ಎಂದು ಹಣವನ್ನು ಪಿಡಿಒ ಆಡಳಿತಾಧಿಕಾರಿಗಳು ಹಾಕಬೇಕಿದೆ. ತಾಂತ್ರಿಕ ಸಮಸ್ಯೆ ಬಗೆಹರಿಸಿದರೆ ಯೋಜನೆಯನ್ನು ಇನ್ನೂ ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದು ಪಿಡಿಒ ಶೋಭಾ ಅಭಿಪ್ರಾಯಪಟ್ಟರು.
ಜಿಪಂ ಸಹಾಯಕ ನಿರ್ದೇಶಕ ವಿಜಯ ಶ್ಯಾಮ್, ಸಹಾಯಕ ನಿರ್ದೇಶಕ ಸುರೇಶ ಮಾತನಾಡಿದರು. ಕುಂದಾಪುರ ತಾಪಂ ಇಒ ಮಹೇಶ ಕೆ.ಜಿ., ಬೈಂದೂರು ತಾಪಂ ಇಒ ನಾಗಶಯನ, ನರೇಗಾ ಸಹಾಯಕ ನಿರ್ದೇಶಕ ರಾಜೇಶ್, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.

ಪಿಡಿಒಗಳ ಅಳಲು

ಕೆ2 ಮೂಲಕ ಪಾವತಿಯಾಗಬೇಕಿರುವುದರಿಂದ ಪ್ರತಿಯೊಂದು ಸಂದರ್ಭದಲ್ಲಿ ಖಜಾನೆಗೆ ಹೋಗಿ ಬರಲು ಕಷ್ಟವಾಗುತ್ತಿದೆ. ಖಜಾನೆಯಲ್ಲಿ ಪಾವತಿ ವಿಳಂಬವಾದರೆ ಪಿಡಿಒ/ಆಡಳಿತಾಧಿಕಾರಿಗಳು ಹೊಣೆಗಾರರಾಗುತ್ತಾರೆ ಎಂದು ಪಿಡಿಒಗಳು ಅಳಲು ತೋಡಿಕೊಂಡರು. ಗ್ರಾಪಂನಲ್ಲಿ ಮತ್ತು ಕ್ಷೇತ್ರದಲ್ಲಿ ಉಪಯೋಗಿಸಿಕೊಳ್ಳಬಹುದಾದ ಕಾಮಗಾರಿಗಳಿದ್ದರೂ ಇಲಾಖಾವಾರು ಲಾಗಿನ್‌ಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಿಳಿಸಿದರು. ಯೋಜನೆ ಆರಂಭಿಕ ಹಂತದಲ್ಲಿ ಇರುವುದರಿಂದ ಸ್ವಲ್ಪ ಗೊಂದಲ ಇದೆ. ಪಾವತಿ ಮಾಡುವ ವಿಧಾನವನ್ನು ಸರಳೀಕರಣಗೊಳಿಸದರೆ ಉತ್ತಮ ಎಂದು ಜಿಪಂ ಸಹಾಯಕ ನಿರ್ದೇಶಕ ವಿಜಯ ಶ್ಯಾಮ್ ಹೇಳಿದರು.

ನಮ್ಮ ಜಿಲ್ಲೆಗೆ ಲಾಭವಾಗುವ ಅನೇಕ ಕಾಮಗಾರಿಗಳು ಈ ಯೋಜನೆಯಲ್ಲಿ ಸೇರಿಕೊಂಡಿದೆ. ಶಾಲಾ ಕಟ್ಟಡ, ವಾಚನಾಲಯ, ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಬಹುದು. 60:40 ಅನುಪಾತ ಪಾಲಿಸುವುದು ಸ್ವಲ್ಪ ಕಷ್ಟವಾಗುತ್ತಿದೆ. ಕೆಲವು ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಇಟ್ಟಿದ್ದರೆ, ಕೆಲವು ಕಾಮಗಾರಿಗಳಿಗೆ ಕಡಿಮೆ ಮಾಡಲಾಗಿದೆ. ವೈಯಕ್ತಿಕ ಕಾಮಗಾರಿಗಳಿಗೆ ಎನ್‌ಎನ್‌ಎಂಎಸ್ ಆ್ಯಪ್ ತಂದಿರುವುದರಿಂದ ಸ್ವಲ್ಪ ಹೊಡೆತ ಬೀಳಲಿದೆ.

— ವಿಜಯ ಶ್ಯಾಮ್ ಜಿಪಂ ಸಹಾಯಕ ನಿರ್ದೇಶಕ

ಈ ವರ್ಷ ಕ್ರಿಯಾ ಯೋಜನೆ ಬಹಳಷ್ಟು ತಡವಾಗಿ ಮಂಜೂರಾತಿ ಆಗಿದೆ. ನರೇಗಾದ ಕಾಮಗಾರಿ ಮುಂದುವರಿಸಲಾಗಿದೆ. ನರೇಗಾದಲ್ಲಿ 266 ಕಾಮಗಾರಿಗಳಿದ್ದು, ವಿಬಿಜಿ 318 ಕಾಮಗಾರಿಗಳನ್ನು ನೀಡಲಾಗಿದೆ. ಕೈಬಿಡಲಾದ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳನ್ನು ಗುರುತು ಮಾಡಿ ಕ್ರಿಯಾ ಯೋಜನೆ ತಯಾರಿಸಬೇಕಿದ್ದು, ಡಿಸೆಂಬರ್ ವೇಳೆಗೆ ಇದು ಇನ್ನಷ್ಟು ಉತ್ತಮಗೊಳ್ಳಬಹುದು.

— ಸುರೇಶ ಸಹಾಯಕ ನಿರ್ದೇಶಕ