ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಮೊದಲಾದ ಕಡೆ ಶನಿವಾರ ಸಂಜೆ ಸುರಿದ ಸಿಡಿಲು, ಗಾಳಿ ಸಹಿತ ಬಿರುಸಿನ ಮಳೆ ಸೆಖೆಯಿಂದ ಬಳಲಿದ್ದ ಪ್ರಕೃತಿಗೆ ತಂಪೆರೆದಿದೆ.
ಬೆಳಗ್ಗೆಯಿಂದಲೇ ಮೋಡ, ವಿಪರೀತ ಸೆಖೆಯ ವಾತಾವರಣ ಕಂಡು ಬಂದಿದ್ದು, ಸಂಜೆಯಾಗುತ್ತಿದ್ದಂತೆ ದಟ್ಟ ಮೋಡ ಕಾಣಿಸಿಕೊಂಡು, ಸಿಡಿಲಿನ ಅಬ್ಬರದೊಂದಿಗೆ ಮಳೆ ಆರಂಭವಾಗಿದೆ. ಸುಮಾರು ಅರ್ಧ ತಾಸಿಗೂ ಅಧಿಕ ಉತ್ತಮ ಮಳೆಯಾಗಿದೆ. ಹಲವು ದಿನಗಳಿಂದ 39 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಬಸವಳಿಯುತ್ತಿದ್ದ ಪ್ರಕೃತಿಗೆ ಏಕಾಏಕಿ ಸುರಿದ ಮಳೆಯಿಂದ ತಣ್ಣನೆಯ ವಾತಾವರಣ ಉಂಟಾಯಿತು. ಇದರ ಜತೆಗೆ ಕೆಲವರು ಸಮಸ್ಯೆಯನ್ನೂ ಎದುರಿಸಿದರು.
ಕೆಲವು ಕೃಷಿಕರ ಅಂಗಳದಲ್ಲಿ ಒಣಗುತ್ತಿದ್ದ ಅಡಿಕೆ ಮಳೆಗೆ ಒದ್ದೆಯಾಗಿದೆ. ಮನೆ ರಿಪೇರಿ ಮಾಡಲು ಮಾಡು ತೆಗೆದಿಟ್ಟವರ ಮನೆಯೊಳಗೆ ನೀರು ತುಂಬಿದೆ. ಯಕ್ಷಗಾನ, ನೇಮೋತ್ಸವ ಹಾಗೂ ಮನೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಿಗೆ ಒಂದಷ್ಟು ಸಮಸ್ಯೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದ ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದವರು ರಸ್ತೆ ಬದಿಯ ಕಟ್ಟಡಗಳಲ್ಲಿ ಆಶ್ರಯ ಪಡೆಯುವಂತಾಯಿತು.
ಅಲ್ಲಲ್ಲಿ ಹಾನಿ: ಬಿರುಸಿನ ಗಾಳಿಗೆ ಜಿಲ್ಲೆಯ ವಿವಿಧ ಕಡೆ ಹಾನಿ ಉಂಟಾಗಿದೆ. ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ರಿಕ್ಷಾ ನಿಲ್ದಾಣಕ್ಕೆ ಅಳವಡಿಸಿದ್ದ ಮಾಡು ಮುರಿದು ಬಿದ್ದಿದೆ. ಇದರಿಂದ ಆಟೋಗಳಿಗೆ ಸಣ್ಣಪುಟ್ಟ ಹಾನಿ ಉಂಟಾಗಿದೆ. ಕೆಲವು ಕಡೆ ಮರ ಉರುಳಿ ಬಿದ್ದು ರಸ್ತೆ ಬಂದ್ ಆಗಿದೆ. ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದ ಪರಿಣಾಮ ಮೊಬೈಲ್ ನೆಟ್‌ವರ್ಕ್ ಕೂಡಾ ಕಡಿತಗೊಂಡಿತು.
ಮಳೆಯಿಂದಾಗಿ ಅಡಿಕೆ ತೋಟಕ್ಕೆ ಎರಡು ಮೂರು ದಿನ ನೀರು ಹಾಕುವ ಅಗತ್ಯವಿಲ್ಲ. ಆದರೆ ಬಿಸಿಲು ಮತ್ತು ಮಳೆಯ ತಾಕಳಾಟದಿಂದ ಅಡಿಕೆ ಹಿಂಗಾರ ಕೊಳೆತು ಫಸಲು ನಷ್ಟವಾಗುವ ಆತಂಕವಿದೆ. ಗೇರು ಬೀಜವೂ ಕಪ್ಪಾಗುವುದರಿಂದ ದರ ಕುಸಿಯುವ ಸಾಧ್ಯತೆ ಇದೆ.