ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ರಾಜಕೀಯ ಜಿದ್ದಾಜಿದ್ದಿನಿಂದಾಗಿ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ಉಪ್ಪಿನಂಗಡಿಯಿಂದ ಕುಪ್ಪೆಟ್ಟಿವರೆಗಿನ ರಸ್ತೆಯ ಸಂಪೂರ್ಣ ಹದಗೆಟ್ಟಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ-ಕಾಂಗ್ರೆಸ್ ನಾಯಕರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಬೀದಿಗಿಳಿದು ಪ್ರತಿಭಟಿಸಲು ಮುಂದಾಗಿದ್ದಾರೆ.
ಬಿಜೆಪಿ ಶಾಸಕರನ್ನು ಹೊಂದಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಈ ರಸ್ತೆಯ ಬಹುಭಾಗ ಶಾಸಕರ ಈ ಹಿಂದಿನ ಅವಧಿಯಲ್ಲಿಯೇ ಅಭಿವೃದ್ಧಿಯಾಗಿತ್ತು. ಕುಪ್ಪೆಟ್ಟಿ-ಉಪ್ಪಿನಂಗಡಿವರೆಗಿನ ಸುಮಾರು 10 ಕಿ.ಮೀ. ರಸ್ತೆ ಹೊಂಡಗುಂಡಿಗಳಿಂದಲೇ ತುಂಬಿ ಹೋಗಿದ್ದು, ದಿನನಿತ್ಯ ದ್ವಿಚಕ್ರ ವಾಹನ ಸವಾರರು ಎದ್ದುಬಿದ್ದು ಸಂಚರಿಸುವ ಸ್ಥಿತಿ ಇಲ್ಲಿದೆ. ಹಲವಾರು ಮಂದಿ ಅವಘಡಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ರಾಜಕೀಯ ನಾಯಕರ ಸ್ವಪ್ರತಿಷ್ಠೆಗೆ ಜನ ಸಾಮಾನ್ಯರು ಸಂಕಷ್ಟಕ್ಕೀಡಾಗುವ ಸ್ಥಿತಿ ಉಂಟಾಗಿದೆ.
ಬಿಜೆಪಿ ಶಾಸಕ ಹರೀಶ್ ಪೂಂಜ ಸದರಿ ರಸ್ತೆ ದುಸ್ಥಿತಿ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪದೇಪದೆ ಪ್ರಸ್ತಾಪಿಸಿ ದುರಸ್ತಿಗೆ ಅನುದಾನ ನೀಡಲು ಪ್ರಸ್ತಾಪಿಸುತ್ತಿದ್ದಾರೆ. ಆದರೆ ಎದುರಾಳಿ ಪಕ್ಷದ ಪ್ರಭಾವಿ ನಾಯಕರ ಹಸ್ತಕ್ಷೇಪದಿಂದಾಗಿ ಅನುದಾನ ಸಿಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ರಾಜ್ಯ ಸರ್ಕಾರದ ಅಸಹಕಾರ ಇದ್ದರೆ ಕೇಂದ್ರ ಸರ್ಕಾರದಿಂದಲಾದರೂ ಅನುದಾನ ಪಡೆದು ರಸ್ತೆ ದುರಸ್ತಿ ಮಾಡಲಿ ಎಂಬ ಮಾತೂ ಸ್ವಪಕ್ಷೀಯರಿಂದಲೇ ಕೇಳಿಬರುತ್ತಿದೆ. ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನಿಂದಾಗ ರಸ್ತೆ ಅಭಿವೃದ್ಧಿ ಕಾಣದೆ ಜನಸಾಮಾನ್ಯರು ನಿತ್ಯವೂ ಸಮಸ್ಯೆ ಎದುರಿಸುವಂತಾಗಿದೆ.
ರಸ್ತೆ ಸಂಪೂರ್ಣ ಹಾಳಾಗಿ ಜನರು ಸಮಸ್ಯೆ ಎದುರಿಸುತ್ತಿದ್ದರೂ ರಾಜಕೀಯ ಸಾಧನೆ ಪ್ರದರ್ಶಿಸುವ ನಾಯಕರ ಈ ತೆರನಾದ ರಾಜಕಾರಣ ನಮಗೆ ಬೇಡ. ಜನರಿಗೆ ಸೌಲಭ್ಯ ಒದಗಿಸಿ ರಾಜಕಾರಣ ಮಾಡಲಿ. ಜನರ ನೆಮ್ಮದಿ ಕೆಡಿಸಿ ರಾಜಕಾರಣ ಮಾಡಿದರೆ ನಾವು ಯಾರನ್ನೂ ಗೌರವಿಸುವುದಿಲ್ಲ. ಪಕ್ಷಾತೀತವಾಗಿ ಬೀದಿಗಿಳಿದು ಹೋರಾಡುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.ಕೆ.ಎಸ್.ಅಬ್ದುಲ್ಲಾ, ಪಂಚಾಯಿತಿ ಮಾಜಿ ಸದಸ್ಯ