ಗ್ರಾಪಂ ಅಧ್ಯಕ್ಷೆ ಪುಷ್ಪಾ ಸುಭಾಷ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಗ್ರಾಪಂ ಉಪಾಧ್ಯಕ್ಷ ಯತೀಶ್ ಕುಮಾರ್ ಎಸ್.ಎಚ್., ಸದಸ್ಯರಾದ ಹರ್ಷಿತ್ ಕುಮಾರ್, ಚಿದಾನಂದ ಪಿ., ನಝೀರ್ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ತೆರವಾಗದ ಅಕೇಶಿಯಾ ಮರ

ಇಂದಿರಾ ಎನ್ ಕೆ
ಕಡಬ: ಕೊಲ ಗ್ರಾಮದ ಕೆ.ಸಿ.ಫಾರ್ಮ್ ಜಾಗದಲ್ಲಿನ ಅಕೇಶಿಯಾ ಮರಗಳನ್ನು ಒಂದು ತಿಂಗಳಿನೊಳಗೆ ತೆರವುಗೊಳಿಸುವುದಾಗಿ ಕಳೆದ ಗ್ರಾಮಸಭೆಯಲ್ಲಿ ಭರವಸೆ ನೀಡಿದ್ದರೂ ತೆರವುಗೊಳಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು 15 ದಿನದೊಳಗೆ ತೆರವುಗೊಳಿಸದೆ ಇದ್ದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಘಟನೆ ಕೊಲ ಗ್ರಾಮಸಭೆಯಲ್ಲಿ ನಡೆದಿದೆ. 
 ಗ್ರಾಪಂ ಅಧ್ಯಕ್ಷೆ ಪುಷ್ಪಾ ಸುಭಾಷ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ಗ್ರಾಮಸಭೆ ನಡೆಯಿತು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಜಿ.ಚೆಲುವರಂಗಪ್ಪ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ವರದಿ ಮೇಲಿನ ಚರ್ಚೆ ವೇಳೆ ವಿಚಾರ ಪ್ರಸ್ತಾಪಿಸಿದ ಜಿ.ಟಿ.ಭಟ್, ಪುರುಷೋತ್ತಮ, ಕೆ.ಸಿ.ಫಾರ್ಮ್‌ನ ಜಾಗದೊಳಗೆ ನಾಟಿ ಮಾಡಿರುವ ಅಕೇಶಿಯಾ ಮರ ಬೆಳೆದು ನಿಂತು ಮಾರ್ಗಕ್ಕೆ ವಾಲಿಕೊಂಡಿದ್ದು, ಹೂವಿನ ವಾಸನೆಯಿಂದ ದಿನನಿತ್ಯ ಸಂಚಾರ ಮಾಡುವುವವರಿಗೆ ತೊಂದರೆಯಾಗುತ್ತಿದೆ. ಇದರಿಂದ ಅಸ್ತಮಾ ರೋಗವೂ ಹರಡುತ್ತದೆ. ಈ ವಿಚಾರ ಕಳೆದ ಗ್ರಾಮಸಭೆಯಲ್ಲೂ ಪ್ರಸ್ತಾಪಿಸಿ ತೆರವುಗೊಳಿಸುವಂತೆ ಒತ್ತಾಯಿಸಿದ್ದೆವು. 1 ತಿಂಗಳೊಳಗೆ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಅಂದಿನ ಗ್ರಾಮಸಭೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಭರವಸೆ ನೀಡಿದ್ದರು. ಆರು ತಿಂಗಳು ಕಳೆದರೂ ಮರ ತೆರವುಗೊಳಿಸಿಲ್ಲ ಯಾಕೆ? ಎಂದು ಪ್ರಶ್ನಿಸಿದರು. ಗ್ರಾಮಸ್ಥರಾದ ಪ್ರಕಾಶ್, ಜುನೈದ್ ಕೆಮ್ಮಾರ, ಸೆಲಿಕತ್‌ಧ್ವನಿಗೂಡಿಸಿದರು. 
 ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಯಶೋಧರ ಅವರಲ್ಲಿ ಚರ್ಚೆಯ ವಿಚಾರ ಗ್ರಾಮಸ್ಥರು ಪ್ರಸ್ತಾಪಿಸಿ, ನೀವು ಲಿಖಿತವಾಗಿ ಅನುಮತಿ ಕೊಡಿ, ನಾವೇ ಮರ ತೆರವುಗೊಳಿಸುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಯಶೋಧರ, ಮರ ತೆರವಿಗೆ ಸಂಬಂಧಿಸಿ ನಮ್ಮ ಹಂತದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೂ ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿರುವ ಮರ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಉಳಿದ ಮರಗಳಿಗೆ ಮಾರ್ಕಿಂಗ್ ಮಾಡಿ ಕಳಿಸ್ತೇವೆ ಎಂದರು. 

 ಪರಿಶೀಲನೆಗೆ ಭರವಸೆ

 ಹದಿನೈದು ದಿನದೊಳಗೆ ಅಕೇಶಿಯಾ ಮರ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಧರಣಿ ನಡೆಸುತ್ತೇವೆ ಎಂದು ಜಿ.ಟಿ.ಭಟ್ ಎಚ್ಚರಿಕೆ ನೀಡಿದರು. ಇಲಾಖಾಧಿಕಾರಿಗಳ ಜತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿಯೂ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಯಶೋಧರ ಭರವಸೆ ನೀಡಿದರು. 
 ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷ ಯತೀಶ್ ಕುಮಾರ್ ಎಸ್.ಎಚ್., ಸದಸ್ಯರಾದ ಹರ್ಷಿತ್ ಕುಮಾರ್, ಚಿದಾನಂದ ಪಿ., ನಝೀರ್, ಚಂದ್ರಶೇಖರ ಮಾಳ, ಸೀತಾರಾಮ ಬಲ್ತಕುಮೇರು, ಕಮಲಾಕ್ಷಿ, ಲತಾ, ಭಾರತಿ, ನೀತಾ ಎನ್., ಸಫಿಯಾ, ಜೊಹರಾಬಿ, ಶಶಿಕಲಾ ಎಂ. ಉಪಸ್ಥಿತರಿದ್ದರು. ಪಿಡಿಒ ಸಂದೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಪಮ್ಮು ವರದಿ ವಾಚಿಸಿದರು.  


 ವಿದ್ಯುತ್ ತಂತಿ ಅಡಿಯಲ್ಲೇ ಗಿಡ ನಾಟಿ

 ಹೆದ್ದಾರಿ ಬದಿ ಗಿಡ ನಾಟಿ ಮಾಡಲು ವಿದ್ಯುತ್ ತಂತಿ ಅಡಿಯಲ್ಲೇ ಗುಂಡಿ ಅಗೆಯಲಾಗಿದೆ. ಇದಕ್ಕೆ ಮೆಸ್ಕಾಂ ಅನುಮತಿ ನೀಡಿದೆಯೇ ಎಂದು ಸದಸ್ಯ ಚಿದಾನಂದ ಪಾನ್ಯಲ್ ಪ್ರಶ್ನಿಸಿದರು. ಮೆಸ್ಕಾಂ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್ ಪ್ರತಿಕ್ರಿಯಿಸಿ, 33 ಕೆ.ವಿ.ವಿದ್ಯುತ್ ತಂತಿ ಅಡಿಯಲ್ಲಿ ಗಿಡ ನಾಟಿ ಮಾಡದಂತೆ ಮೆಸ್ಕಾಂನಿಂದ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಪಿಡಬ್ಲುೃಡಿ ರಸ್ತೆ ಮಾರ್ಜಿನ್‌ನಲ್ಲಿ ಗಿಡ ನಾಟಿ ಮಾಡುತ್ತಿರುವುದಾಗಿ ಇಲಾಖೆ ತಿಳಿಸಿದೆ ಎಂದರು.