ಯಾವುದೇ ಮಾಹಿತಿ ನೀಡದೆ, ಪರಿಹಾರವನ್ನೂ ನೀಡದೆ ಪಟ್ಟಾ ಜಾಗದಲ್ಲಿರುವ ಅಡಿಕೆ ಮರಗಳನ್ನು ತೆರವು ಮಾಡಿರುವುದು.  
ದಕ್ಷಿಣ ಕನ್ನಡ

ನಿಮಯ ಉಲ್ಲಂಘಿಸಿ ೪೦೦ ಕೆವಿ ಕಾಮಗಾರಿ UKTCL

ಪೂರ್ವಾನುಮತಿ ಇಲ್ಲದೆ ರೈತರ ಭೂಮಿಗೆ ಅತಿಕ್ರಮ ಪ್ರವೇಶ ಆರೋಪ

ಪುತ್ತೂರು: ತಾಲೂಕಿನಾದ್ಯಂತ ಹಾದುಹೋಗುವ ಯುಕೆಟಿಸಿಎಲ್ ೪೦೦ ಕೆವಿ ವಿದ್ಯುತ್ ಮಾರ್ಗ ರಚನೆಯ ವಿಚಾರವಾಗಿ ಗಂಭೀರ ಆರೋಪಗಳು ಕೇಳಿಬಂದಿದ್ದು, ಸ್ಥಳೀಯ ರೈತರು ಹಾಗೂ ಜಾಗದ ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಪೂರ್ವಾನುಮತಿ ಇಲ್ಲದೆ, ಸೂಕ್ತ ಮಾಹಿತಿಯನ್ನೂ ನೀಡದೆ ಖಾಸಗಿ ಜಾಗಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಮರಗಳನ್ನು  ಧರೆಗುರುಳಿಸುವ ಕಾರ್ಯ ನಡೆಯುತ್ತಿದೆ ಎಂದು ಬಾಧಿತರು ದೂರಿದ್ದಾರೆ.

ನಿಯಮಗಳ ಉಲ್ಲಂಘನೆ: ಹೈಕೋರ್ಟ್‌ನ ಲೈವ್ ವಿಚಾರಣೆ ವೇಳೆ ಹಲವು ಭಾಗಗಳಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಮೌಖಿಕ ಸೂಚನೆ ನೀಡಿದ್ದರೂ, ಅದನ್ನು ಲೆಕ್ಕಿಸದೆ ಮರ ತೆರವು ಹಾಗೂ ಕಂಬ, ತಂತಿ ಅಳವಡಿಕೆ ಕಾರ್ಯಗಳನ್ನು ಮುಂದುವರಿಸಲಾಗುತ್ತಿದೆ. ಮುಂದಿನ ವಿಚಾರಣೆಯನ್ನು ಅ.೨೭ಕ್ಕೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ. ಆದರೂ ರೈತರ ಜಮೀನಿನಲ್ಲಿ ವಿರೋಧದ ನಡುವೆಯೂ ಕಾಮಗಾರಿ ನಡೆಯುತ್ತಿದೆ. ಅಲ್ಲದೆ, ನ್ಯಾಯಾಲಯಕ್ಕೆ ಸಲ್ಲಿಸಲಾದ ಮಾಹಿತಿಯಲ್ಲಿ ಇಲ್ಲದ ಸ್ಥಳಗಳಲ್ಲೂ ಮರಗಳನ್ನು ಕತ್ತರಿಸಲು ಕಾರ್ಮಿಕರನ್ನು ಅಕ್ರಮವಾಗಿ ಕಳುಹಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಸೂಕ್ತ ಪರಿಹಾರ ಮತ್ತು ಮಾಹಿತಿ ಕೊರತೆ: ಮೂಲ ದಾಖಲೆಗಳು ಹಾಗೂ ವಿದ್ಯುತ್ ಮಾರ್ಗದ ನಕ್ಷೆಗಳಲ್ಲಿ ಇಲ್ಲದ ಪ್ರದೇಶಗಳಲ್ಲೂ ಕಾಮಗಾರಿ ನಡೆಸಲಾಗುತ್ತಿದೆ. ಜಾಗದ ಮಾಲೀಕರಿಗೆ ಯಾವುದೇ ಸೂಕ್ತ ಮಾಹಿತಿಯಾಗಲೀ ಅಥವಾ ಪರಿಹಾರವಾಗಲೀ ನೀಡಿಲ್ಲ. ವಿರೋಧ ವ್ಯಕ್ತವಾದ ಸ್ಥಳಗಳಲ್ಲಿ ಸ್ಥಳೀಯ ಆಡಳಿತ ಕಚೇರಿಗಳ ಮುಂದೆ ಸರ್ವೇ ನಂಬರ್ ಪಟ್ಟಿಯನ್ನು ಪ್ರಕಟಿಸಲಾಗಿದೆಯಾದರೂ, ಅದರಲ್ಲಿ ಇಲ್ಲದ ಸರ್ವೇ ನಂಬರ್‌ಗಳ ಜಾಗದಲ್ಲೂ ದಬ್ಬಾಳಿಕೆ ಮೂಲಕ ಕಾಮಗಾರಿಗೆ ಮುಂದಾಗಿದ್ದಾರೆ ಎನ್ನಲಾಗಿದೆ. 

ಅರಣ್ಯ, ಪರಿಸರ ಹಾನಿ: ಎನ್‌ಜಿಟಿ ಮುಂದೆ ಈಗಾಗಲೇ ಮರ ತೆರವುಗೊಳಿಸಲಾಗಿದೆ, ಇನ್ನು ಮುಂದೆ ಮಾಡುವುದಿಲ್ಲ ಹಾಗೂ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸುವುದಿಲ್ಲ ಎಂದು ಕಂಪನಿ ಹೇಳಿಕೆ ನೀಡಿದ್ದರೂ, ಪ್ರತಿಯೊಂದು ಟವರ್ ಬಳಿಯೂ ಪ್ರತ್ಯೇಕ ರಸ್ತೆಗಳನ್ನು ನಿರ್ಮಿಸಿ ಪರಿಸರಕ್ಕೆ ಹಾನಿ ಮಾಡಲಾಗಿದೆ.

ರೈತರು, ಸಾರ್ವಜನಿಕರು, ರೈತ ಸಂಘದ ಹೋರಾಟದಿಂದ ಯೋಜನೆಗೆ ತಡೆಯಾಗಿತ್ತು. ಇದರಿಂದ ಯೋಜನೆಯು ನಿಗದಿತ ಸಮಯದೊಳಗೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಾಗೂ ಸರ್ಕಾರಿ ಇಲಾಖೆಗಳು ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವ ಕಾರಣ, ಪ್ರಭಾವ ಬಳಸಿ ಅಧಿಕಾರಿಗಳನ್ನು ಮೌನವಾಗಿಸಿ ಯೋಜನೆ ಜಾರಿಗೆ ತರಲಾಗುತ್ತಿದೆ. ಕೆಲವೆಡೆ ಹಣದ ಆಮಿಷ ಒಡ್ಡಿದರೆ, ಮತ್ತೆ ಕೆಲವೆಡೆ ಇಲಾಖೆಗಳನ್ನು ಬಳಸಿ ಬೆದರಿಕೆ ತಂತ್ರ ಅನುಸರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಪರವಾನಗಿ ಇಲ್ಲದೆ ಸರ್ಕಾರಿ ಜಾಗಕ್ಕೆ ಪ್ರವೇಶ

ದೇವಸ್ಯ, ಅಮ್ಟೂರು, ಸೀಗೆಬಲ್ಲೆ ಭಾಗದ ರೈತರು ಮಾರ್ಗ ವಿರೋಧಿಸಿ ಸಲ್ಲಿಸಿರುವ ದಾವೆ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ವಿಟ್ಲದ ತೋಟಗಾರಿಕೆ ಇಲಾಖೆಗೆ ಸೇರಿದ ಭೂಮಿಯಲ್ಲಿನ ಮಾವು, ಹಲಸು ಸೇರಿದಂತೆ ಕೃಷಿ ಮರಗಳನ್ನು ತೆರವುಗೊಳಿಸಲು ಅಕ್ರಮವಾಗಿ ಕಾರ್ಮಿಕರನ್ನು ಕಳುಹಿಸಲಾಗಿತ್ತು. ಆದರೆ, ಇಲಾಖೆಯ ಕೇಂದ್ರ ಕಚೇರಿಯಿಂದ ಅನುಮತಿ ಸಿಗದ ಕಾರಣ ಸ್ಥಳೀಯ ಅಧಿಕಾರಿಗಳು ಈ ಪ್ರಕ್ರಿಯೆಗೆ ತಡೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲ ವ್ಯವಸ್ಥೆಯಲ್ಲಿ ಕೆಲವು ಪ್ರಭಾವಿಗಳ ಜಾಗಕ್ಕೆ ಸಮಸ್ಯೆಯಾಗುತ್ತದೆಯೆಂದು ಟವರ್ ಸ್ಥಳ ಬದಲಾವಣೆ ಮಾಡಲಾಗಿದೆ. ಇದರಿಂದ ಹಲವು ರೈತರಿಗೆ ಸಮಸ್ಯೆಯಾಗುತ್ತಿದೆ. ಕೆಲವು ಭಾಗದಲ್ಲಿ ಪರಿಹಾರ ವಿತರಣೆ ಮಾಡಿದ್ದು, ಕೆಲವರಿಗೆ ಇನ್ನೂ ಪರಿಹಾರ ನೀಡದೆ ಮರಗಳ ತೆರವು ನಡೆಯುತ್ತಿದೆ. ಒಟ್ಟಿನಲ್ಲಿ ಕಾನೂನು ಗಾಳಿಗೆ ತೂರಿ ನಡೆಸುವ ಕಾಮಗಾರಿಗೆ ಎಲ್ಲ ವ್ಯವಸ್ಥೆಗಳೂ ಬೆಂಬಲವಾಗಿ ನಿಂತಿರುವುದು ಖೇದಕರವಾಗಿದೆ.
ರವೀಶ್ ಎಸ್., ಬಾಧಿತ ರೈತ