ಉಕ್ಕುಡ ಸಮೀಪದ ಕಪ್ಪುಕಲ್ಲಿನ ಕ್ವಾರಿಗೆ ಬಿದ್ದು ಮೃತಪಟ್ಟಿರುವ ಕಾಡುಕೋಣಗಳು. 
ದಕ್ಷಿಣ ಕನ್ನಡ

ಕಲ್ಲು ಕ್ವಾರಿಗೆ ಬಿದ್ದು ಮೂರು ಕಾಡುಕೋಣ ಸಾವು UKKUDA

ವಿಟ್ಲ: ಉಕ್ಕುಡ ಸಮೀಪ ಕಪ್ಪುಕಲ್ಲು ಕ್ವಾರಿಗೆ ಮೂರು ಕಾಡುಕೋಣಗಳು ಬಿದ್ದು ಮೃತಪಟ್ಟಿದ್ದು, ಈ ಸಂಬಂಧ ಅಧಿಕಾರಿಗಳು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಶುಕ್ರವಾರ ಬೆಳಗ್ಗೆ ಮರಿ ಹಾಗೂ ಎರಡು ಹೆಣ್ಣು ಕಾಡುಕೋಣಗಳು ಏಕಾಏಕಿ ಕಲ್ಲಿನ ಕ್ವಾರಿಗೆ ಇಳಿದಿವೆ. ಅವುಗಳನ್ನು ಮೇಲೆತರಲು ಪ್ರಯತ್ನಿಸಿದಾಗ ಭಯಗೊಂಡ ಕಾಡುಕೋಣಗಳು ಎಲ್ಲೆಂದರಲ್ಲಿ ಓಡಿ ಕ್ವಾರಿಯ ಗುಂಡಿಗೆ ಬಿದ್ದು ಗಾಯಗೊಂಡಿವೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಕಾಣುಕೋಣಗಳ ರಕ್ಷಣೆಗೆ ಪ್ರಯತ್ನಿಸಿದರು. ಆದರೆ ಗಾಯಗೊಂಡಿದ್ದ ಕಾಡುಕೋಣಗಳು ಮೃತಪಟ್ಟಿದ್ದವು. ಕಳೇಬರವನ್ನು ರಕ್ಷಿತಾರಣ್ಯ ಪ್ರದೇಶಕ್ಕೆ ತಂದು ಎಸಿಎಫ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಪ್ರಕ್ರಿಯೆ ನಡೆಸಲಾಯಿತು.

ಎಸಿಎಫ್ ಸುಬ್ಬಯ್ಯ ನಾಯ್ಕ, ಡಿಆರ್‌ಎಪ್ ಒ ವೀರಣ್ಣ, ಉಲ್ಲಾಸ್, ಚಂದ್ರು ಬಿ.ಜೆ., ರಾಜೇಂದ್ರ ಕುಮಾರ್, ಮಹಾಬಲ, ಅರಣ್ಯ ಪಾಲಕರಾದ ದಯಾನಂದ, ರಘು ಪಿ.ಬಿ., ಅರಣ್ಯ ವೀಕ್ಷಕರಾದ ಮುತ್ತಣ್ಣ, ಬಾಗಣ್ಣ ಮತ್ತಿತರರು ಹಾಜರಿದ್ದರು.

ಯುಕೆಟಿಸಿ ಎಲ್ ೪೦೦ಕೆವಿ ವಿದ್ಯುತ್ ಮಾರ್ಗ ರಚನೆಯ ಬಳಿಕ ಕಾಡುಪ್ರಾಣಿಗಳು ನಾಡಿತ್ತ ಮುಖಮಾಡುತ್ತಿದೆ. ಇವು ಹತ್ತಿರದ ಅರಣ್ಯ ಪ್ರದೇಶದಿಂದ ಆಗಮಿಸಿರಬಹುದೆಂದು ಹೇಳಲಾಗಿದೆ. ಕ್ವಾರಿಯ ಸುತ್ತ ಸೂಕ್ತ ರಕ್ಷಣಾ ವ್ಯವಸ್ಥೆಯಿಲ್ಲದಿರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ.