ಕಾಸರಗೋಡು: ಜಿಲ್ಲೆಯ ವೆಸ್ಟ್ ಎಳೇರಿ ವರಕ್ಕಾಟ್‌ನಲ್ಲಿ ಕೊಳವೆಬಾವಿ ಕೊರೆಯುವ ಯಂತ್ರ ಅಳವಡಿಸಿದ್ದ ಟ್ರಾೃಕ್ಟರ್ ನಿಯಂತ್ರಣ ತಪ್ಪಿ ಮನೆಗೆ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮನೆಯೊಳಗಿದ್ದವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಮಧ್ಯಪ್ರದೇಶ ನಿವಾಸಿ ದೇವೇಂದ್ರ ಮತ್ತು ಛತ್ತೀಸ್‌ಗಡ್ ನಿವಾಸಿ ಮುನಾಸರ್ ಮೃತರು. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಮೃತದೇಹಗಳನ್ನು ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ಮಹಜರು ನಡೆಸಿದ ನಂತರ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.
ಕೊಳವೆ ಯಂತ್ರ ಅಳವಡಿಸಿ ವಾಪಸಾಗುತ್ತಿದ್ದ ವಾಹನ ವೆಸ್ಟ್ ಎಳೇರಿ ವರಕ್ಕಾಟ್ ತಿರುವಿನ ಇಳಿಜಾರು ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜೈಸನ್ ಎಂಬುವರ ಮನೆಯ ಟೆರೇಸ್ ಮೇಲೆ ಬಿದ್ದಿದೆ. ಆ ವಾಹನದಲ್ಲಿ ಅಳವಡಿಸಲಾಗಿದ್ದ ಕೊಳವೆಯಂತ್ರದ ಕ್ರೇನ್ ಮನೆ ಗೋಡೆಗೆ ಬಡಿದು ನಿಂತಿತ್ತು. ಇದರಿಂದ ಕೊಳವೆ ಯಂತ್ರ ಮನೆ ಮೇಲೆ ಬೀಳುವುದು ತಪ್ಪಿದ್ದು, ಮನೆಯವರು ಸಂಭಾವ್ಯ ಅಪಾಯದಿಂದ ಪಾರಾಗಿದ್ದರು. ಮನೆಗೂ ಹೆಚ್ಚಿನ ಹಾನಿಯುಂಟಾಗಿದ್ದು, ಅಪಘಾತದಿಂದ ಸನಿಹದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ಕುಂಬಳೆ ಪೆರ್ಮುದೆ ಸನಿಹದ ಪೆರಿಯಡ್ಕದಲ್ಲಿ ಕಾರ್ ವರ್ಕ್‌ಶಾಪ್ ಒಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿ, ವರ್ಕ್‌ಶಾಪ್ ಮುಂಭಾಗ ನಿಲ್ಲಿಸಿದ್ದ ನಾಲ್ಕು ಕಾರುಗಳ ಗಾಜುಗಳನ್ನು ಕಲ್ಲಿನಿಂದ ಹೊಡೆದು ಪುಡಿಗೈಯಲಾಗಿದೆ. ಟಿ.ರೋಹಿತಾಕ್ಷ ಎಂಬುವರ ಮಾಲೀಕತ್ವದ ಆದ್ಯ ಆಟೋಮೊಬೈಲ್ಸ್ ವರ್ಕ್‌ಶಾಪ್‌ನಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಇದೇ ವರ್ಕ್‌ಶಾಪ್‌ನಲ್ಲಿ ಕೆಲ ದಿನಗಳ ಹಿಂದೆ ವರ್ಕ್‌ಶಾಪ್ ಸನಿಹ ನಿಲ್ಲಿಸಿದ್ದ ಕಾರೊಂದಕ್ಕೆ ಬೆಂಕಿ ಹಚ್ಚಿ ನಾಶಪಡಿಸಲಾಗಿತ್ತು. ಇದೀಗ ಮತ್ತೆ ನಾಲ್ಕು ಕಾರುಗಳ ಗಾಜುಗಳನ್ನು ಒಡೆಯಲಾಗಿದ್ದು, ಒಂದೇ ವ್ಯಕ್ತಿಯ ಕೃತ್ಯವಾಗಿರಬಹುದು ಎಂದು ವರ್ಕ್‌ಶಾಪ್ ಮಾಲೀಕರು ಸಂಶಯ ವ್ಯಕ್ತಪಡಿಸಿದ್ದಾರೆ. ಅಂದು ಪೈವಳಿಕೆ ನಿವಾಸಿ ಅಬ್ದುಲ್ ರಶೀದ್ ಎಂಬವರ ಮಾಲೀಕತ್ವದ ವೋಕ್ಸ್‌ವ್ಯಾಗನ್ ಪೋಲೋ ಕಾರಿಗೆ ದುಷ್ಕರ್ಮಿ ಬೆಂಕಿ ಹಚ್ಚಿದ್ದು, ಈ ಕೃತ್ಯ ವರ್ಕ್‌ಶಾಪ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಆರ್.ಪಿ.ಅನೂಪ್‌ಕೃಷ್ಣ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು.
ಕಾಸರಗೋಡು: ಸಚಿವ ಒ.ಜೆ.ಜಿನೀಶ್ ಅವರ ವಾಹನ ತಡೆದು ಕಪ್ಪು ಬಾವುಟ ಪ್ರದರ್ಶಿಸಿ ಡಿವೈಎಫ್‌ಐ ಕಾಞಂಗಾಡಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿನ್ನೆಲೆ ತಾತ್ಕಾಲಿಕ ಸರ್ಕಾರಿ ವೈದ್ಯನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಾಞಂಗಾಡಿನ ಕಾಸರಗೋಡು ಜಿಲ್ಲಾಸ್ಪತ್ರೆಯ ತಾತ್ಕಾಲಿಕ ದಂತವೈದ್ಯ ಡಾ.ಸಿದ್ಧಾರ್ಥ್ ರವೀಂದ್ರನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಎನ್‌ಎಚ್‌ಎಂ ಜಿಲ್ಲಾ ಪ್ರೋಗ್ರಾಂ ಮ್ಯಾನೇಜರ್ ಡಾ.ಧನ್ಯಾ ದಯಾನಂದ್ ಶಿಫಾರಸಿನನ್ವಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸೊಸೈಟಿಯೊಂದಿಗೆ ನಡೆಸಲಾದ ಒಪ್ಪಂದದ ಉಲ್ಲಂಘನೆ ಉಲ್ಲೇಖಿಸಿ ಅಮಾನತು ಆದೇಶ ಹೊರಡಿಸಲಾಗಿದೆ.
ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಡಾಲುಮೇರ್ಕಳದ ಮನೆಯೊಂದರ ಜಗುಲಿಯಲ್ಲಿ ಶನಿವಾರ ಮಹಿಳೆ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇಲ್ಲಿನ ಲಂಕಿನಡ್ಕ ನಿವಾಸಿ ಸವಿತಾ(51)ಮೃತಪಟ್ಟವರು. ಅವರ ಜತೆ ವಾಸಿಸುತ್ತಿರುವ ಕರ್ನಾಟಕ ಶಿವಮೊಗ್ಗ ನಿವಾಸಿ ಚೆನ್ನಪ್ಪ ನೆರೆಮನೆಯವರಿಗೆ ಮಾಹಿತಿ ನೀಡಿದ್ದರು. ಮಹಿಳೆ ಮೃತದೇಹ ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿದ್ದು ಕೈ ಕಾಲುಗಳಲ್ಲಿ ಗಾಯಗಳು ಕಂಡು ಬಂದಿದ್ದು, ಸಾವಿನ ಬಗ್ಗೆ ನಿಗೂಢತೆ ಕಂಡುಬಂದಿದೆ.
ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಗುರುತಿನ ಚೀಟಿಯೊಂದು ಲಭಿಸಿದ್ದು, ಸವಿತಾ ಅವರ ಪತಿ ಹೆಸರು ಕುಂಟಂಗೇರಡ್ಕ ನಿವಾಸಿ ದಿನೇಶ ಎಂದು ದಾಖಲಾಗಿದೆ. ಈ ಹಿಂದೆ ಜೋಡುಕಲ್ಲು ನರಸಣ್ಣ ಕಾಲನಿಯಲ್ಲಿ ವಾಸಿಸುತ್ತಿದ್ದ ಸವಿತಾ ಕೆಲವು ವರ್ಷಗಳಿಂದ ಕುಡಾಲುಮೇರ್ಕಳದ ಬಾಡಿಗೆ ಮನೆಯಲ್ಲಿದ್ದು, ಎರಡು ವರ್ಷದ ಹಿಂದೆ ಲೈಫ್ ಯೋಜನೆಯನ್ವಯ ಮಂಜೂರಾಗಿ ಲಭಿಸಿದ ಮನೆಯಲ್ಲಿ ಶಿವಮೊಗ್ಗ ನಿವಾಸಿ ಚೆನ್ನಪ್ಪ(62)ಜತೆ ವಾಸಿಸುತ್ತಿದ್ದರು. ಇವರಿಬ್ಬರೂ ಮದ್ಯಪಾನ ಮಾಡಿ ಜಗಳಾಡುತ್ತಿದ್ದರೆಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.