ಮೊಹಮ್ಮದ್ ಸಮೀರ್ 
ದಕ್ಷಿಣ ಕನ್ನಡ

ಕೂಳೂರು ಎಂಡಿಎಂಎ ಮಾರಾಟಕ್ಕೆ ಯತ್ನ ತುಮಕೂರಿನ ಇಬ್ಬರು ಬಂಧನ

ಮಂಗಳೂರು: ಬಂಗ್ರ ಕೂಳೂರು ಫಲ್ಗುಣಿ ನದಿ ತೀರದ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಡಿ ತುಮಕೂರು ಮೂಲದ ಇಬ್ಬರು ಆರೋಪಿಗಳನ್ನು ಕಾವೂರು ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ತುಮಕೂರು ಪಿ.ಎಚ್. ಕಾಲನಿ 13 ನೇ ಕ್ರಾಸ್ ನಿವಾಸಿ ಶಾಫಿ ಅಹ್ಮದ್ (40) ಮತ್ತು ಕೋತಿಪುರ ಅಪೋಲೋ ಮೆಡಿಕಲ್ ರಸ್ತೆ ನಿವಾಸಿ ಮೊಹಮ್ಮದ್ ಸಮೀರ್ (20) ಬಂಧಿತ ಆರೋಪಿಗಳು.
ಆರೋಪಿಗಳಿಂದ ಸುಮಾರು 70 ಸಾವಿರ ರೂ. ಮೌಲ್ಯದ 12 ಗ್ರಾಂ ಎಂ.ಡಿ.ಎಂಎ. ಹಾಗೂ ಸುಮಾರು 10 ಸಾವಿರ ರೂ. ಮೌಲ್ಯದ 275 ಗ್ರಾಂ ಗಾಂಜಾ, ಆರೋಪಿಗಳು ಬಳಸುತ್ತಿದ್ದ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಳ್ಳಲಾಗಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನಿಂದ ನೀಗ್ರೋಗಳ ಬಳಿ ಖರೀದಿಸಿ ತಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಶಾಫಿ ಅಹ್ಮದ್ ಮೇಲೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ಹಲವು ಪ್ರಕರಣಗಳಲ್ಲಿ ವಾರಂಟ್ ಹಾಗೂ ಪ್ರೊಕ್ಲಮೇಶನ್ ಜಾರಿಗೊಳಿಸಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು. ತುಮಕೂರಿನ ನ್ಯೂ ಎಕ್ಸ ಟೆನ್ಶನ್, ಜಯನಗರ, ತಿಲಕ್ ಪಾರ್ಕ್, ಹೆಬ್ಬೂರು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಮೊಹಮ್ಮದ್ ಸಮೀರ್ ವಿರುದ್ಧ ತುಮಕೂರು ಡಿಸಿಬಿ ವಿಶೇಷ ಪೊಲೀಸ್ ಠಾಣೆಯಲ್ಲಿಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಉತ್ತರ ಉಪ ವಿಭಾಗ ಎಸಿಪಿ ಶ್ರೀಕಾಂತ್ ಕೆ, ಕಾವೂರು ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಬೈಂದೂರ್, ಪಿಎಸ್‌ಐ ಮಲ್ಲಿಕಾರ್ಜುನ್, ಎ.ಎಸ್.ಐ. ಚಂದ್ರಶೇಖರ್, ಸಿಬಂದಿ ರೆಜಿ ಎಂ., ಹಾಲೇಶ್ ನಾಯ್ಕ, ರಿಯಾಜ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.