ದಕ್ಷಿಣ ಕನ್ನಡ

ಕಣ್ಣೂರು ಅಕ್ರಮ ಮರಳು ಸಾಗಾಟಕ್ಕೆ ಯತ್ನ

ಇಬ್ಬರ ಬಂಧನ, ನಾಲ್ಕು ಟಿಪ್ಪರ್ ವಶಕ್ಕೆ

ಮಂಗಳೂರು: ನಗರದ ಹೊರ ವಲಯದ ಕಣ್ಣೂರಿನಲ್ಲಿ ನೇತ್ರಾವತಿ ನದಿಯಿಂದ ದೋಣಿಯಲ್ಲಿ ಮರಳು ಅಕ್ರಮವಾಗಿ ತೆಗೆದು ಟಿಪ್ಪರ್ ಮೂಲಕ ಸಾಗಾಟಕ್ಕೆ ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಕಂಕನಾಡಿ ನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ನಾಲ್ಕು ಟಿಪ್ಪರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಟಿಪ್ಪರ್ ಚಾಲಕರಾದ ಕಣ್ಣೂರು ಬೋರುಗುಡ್ಡೆ ಮೊಹಮ್ಮದ್ ಆಯೂಬ್ (47) ಮತ್ತು ಕಣ್ಣೂರು ಕುಂಡಾಲ ಮಸೀದಿ ಹತ್ತಿರದ ಮೊಹಮ್ಮದ್ ಆಸೀಫ್ (31) ಬಂಧಿತರು. ಉಳಿದ ಟಿಪ್ಪರ್ ಚಾಲಕರು ಮತ್ತು ದೋಣಿಯಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ನೇತ್ರಾವತಿ ನದಿ ಕಿನಾರೆಯಲ್ಲಿ ದೋಣಿಯ ಮೂಲಕ ಮರಳನ್ನು ತೆಗೆದು ಟಿಪ್ಪರ್ ಗೆ ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡಲು ಉದ್ದೇಶಿಸಿರುವ ಬಗ್ಗೆ ಖಚಿತ ಮಾಹಿತಿಯಂತೆ ಠಾಣೆಯ ಪಿಎಸ್ ಐ ವಿನಾಯಕ ಭಾವಿಕಟ್ಟೆ ಅವರು ಸಿಬಂದಿಯೊಂದಿಗೆ ಅ.5ರಂದು ಬೆಳಗ್ಗೆ 5 ಗಂಟೆಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಈ ವೇಳೆ ನಾಲ್ಕು ಟಿಪ್ಪರ್ ಲಾರಿಗಳನ್ನು ಸಾಲಾಗಿ ನಿಲ್ಲಿಸಿ ದೋಣಿಯಿಂದ ಲಾರಿಗೆ ಮರಳನ್ನು ಲೋಡ್ ಮಾಡಲು ಸಿದ್ಧತೆ ಮಾಡುತ್ತಿರುವುದು ಕಂಡು ಬಂದಿದೆ. ಪೊಲೀಸರನ್ನು ಕಂಡು ದೋಣಿ ಹಾಗೂ ಎರಡು ಟಿಪ್ಪರ್ ಚಾಲಕರು ಸ್ಥಳದಿಂದ ಓಡಿ ಹೋಗಿದ್ದಾರೆ. ಇನ್ನೆರಡು ಟಿಪ್ಪರ್ ನಲ್ಲಿದ್ದ ಚಾಲಕರಾದ ಮೊಹಮ್ಮದ್ ಆಯೂಬ್ ಮತ್ತು ಮೊಹಮ್ಮದ್ ಆಸೀಫ್ ಬಾಕಿಯಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ನೇತ್ರಾವತಿ ನದಿಯಿಂದ ದೋಣಿ ಮೂಲಕ ಅಕ್ರಮವಾಗಿ ಮರಳನ್ನು ಕಳವು ಮಾಡಿ ಅದನ್ನು ಸರ್ಕಾರಕ್ಕೆ ರಾಜಧನ ಪಾವತಿಸದೆ ಸಾಗಟ ಮಾಡಲು ಸಿದ್ದತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ, ಪಂಚರ ಸಮಕ್ಷಮ ಸೊತ್ತುಗಳನ್ನು ಪರಿಶೀಲಿಸಿ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ನಾಲ್ಕು ಟಿಪ್ಪರ್ ಮೌಲ್ಯ ಸುಮಾರು 18 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಉಳಿದಂತೆ 5 ಸಾವಿರ ರೂ. ಮೌಲ್ಯದ ಕಬ್ಬಿಣದ ಮೆಟ್ಟಿಲುಗಳಿರುವ ಸ್ಟ್ಯಾಂಡ್, 22 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 18,27,000 ರೂ. ಎಂದು ಅಂದಾಜಿಸಲಾಗಿದೆ.

ಉಳಿದ ಟಿಪ್ಪರ್ ಗಳ ಚಾಲಕರು ಹಾಗೂ ಮಾಲೀಕರ ಮತ್ತು ದೋಣಿಯ ಕೆಲಸಗಾರರು ಹಾಗೂ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.