ಝಕಾರಿಯಾ, ಮಿಥುನ್ ಪೂಜಾರಿ ಬಂಧಿತ ಆರೋಪಿಗಳು.
ಮಂಗಳೂರು: ಮುಕ್ಕ ವೇಯಿಂಗ್ ಬ್ರಿಡ್ಜ್ ಬಳಿ ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಸುರತ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ ಕಾಪುವಿನ ಮಜೂರು ಕೊಂಬುಗುಡ್ಡೆಯ ಝಕಾರಿಯಾ (38) ಮತ್ತು ಉಡುಪಿ ಜಿಲ್ಲೆ ಸಂತೆಕಟ್ಟೆ ಉಳ್ಳೂರು ಗ್ರಾಮ ತೆಂಕಬೆಟ್ಟು ಅಬ್ಬನಕುದ್ರುವಿನ ಮಿಥುನ್ ಪೂಜಾರಿ (23) ಬಂಧಿತ ಆರೋಪಿಗಳು.
ಕಾಪು ನಿವಾಸಿ ಝಕಾರಿಯ ಎಂಬಾತ ಎಂಡಿಎಂಎ ಮಾರಾಟ ಮಡಲು ಬರುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಫೆ.27ರಂದು ಸಂಜೆ 4.15ರ ವೇಳೆಗೆ ಸುರತ್ಕಲ್ ಠಾಣೆ ಪೊಲೀಸರು ಮುಕ್ಕ ವೇಯಿಂಗ್ ಬ್ರಿಡ್ಜ್ ಬಳಿ ತೆರಳಿದ್ದು,ಈ ವೇಳೆ ಎರಡು ಕಾರುಗಳು ಅಕ್ಕಪಕ್ಕ ನಿಂತಿರುವುದು ಕಂಡು ಬಂದಿದೆ. ವಿಚಾರಣೆ ನಡೆಸಿದಾಗ ಸುರತ್ಕಲ್ ಪರಿಸರದ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಎಂಡಿಎಂಎ ಮಾರಾಟ ಮಾಡಲು ಬಂದಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ತಪಾಸಣೆಗೆ ಒಳಪಡಿಸಿದಾಗ ಝಕಾರಿಯ ಬಳಿ 18.42 ಗ್ರಾಂ ಹಾಗೂ ಮಿಥುನ್ ಪೂಜಾರಿ ಬಳಿ 36.18 ಗ್ರಾಂ. 5.41 ಲಕ್ಷ ರೂ. ಮೌಲ್ಯದ ಸೇರಿ ಒಟ್ಟು 54.6 ಗ್ರಾಂ ಎಂಡಿಎಂ ಪತ್ತೆಯಾಗಿದೆ. ಆರೋಪಿಗಳಿಂದ 13 ಲಕ್ಷ ರೂ. ಮೌಲ್ಯದ ಎರಡು ಕಾರು, 20 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಫೋನ್ ಹಾಗೂ 11,700 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 18,72,700 ರೂ. ಆಗಿದ್ದು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿ ಝಕಾರಿಯ ಮೇಲೆ 2009ರಲ್ಲಿ ಬಜ್ಜೆ ಠಾಣೆಯಲ್ಲಿ ಹಲ್ಲೆ ಪ್ರಕರಣ, ಮೂಲ್ಕಿ ಠಾಣೆಯಲ್ಲಿ 2020ರಲ್ಲಿ ಹಲ್ಲೆ ಪ್ರಕರಣ ಹಾಗೂ 2022 ಮಹಿಳೆಯ ಮೇಲೆ ನಡೆದ ಹಲ್ಲೆ ಪ್ರಕರಣ ಮತ್ತು 2021ರಲ್ಲಿ ಉಡುಪಿ ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ಹಾಗೂ 2022ರಲ್ಲಿ ಪಡುಬಿದ್ರೆ ಠಾಣೆಯಲ್ಲಿ ಹಲ್ಲೆ ಪ್ರಕರಣ ಹೀಗೆ ಒಟ್ಟು 5 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.