ಮಂಗಳೂರು: ಪಡೀಲ್ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮೊಬೈಲ್ ನಲ್ಲಿ ಬೆಟ್ಟಿಂಗ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಪ್ರಿತೇಶ್ ಹಾಗೂ ರಂಜಿತ್ ಬಂಧಿತ ಆರೋಪಿಗಳು.
ಬಾತ್ಮೀದಾರರಿಂದ ಲಭ್ಯವಾದ ಖಚಿತ ಮಾಹಿತಿಯಂತೆ ಸೋಮವಾರ ಬೆಳಗ್ಗೆ 11.25ರ ವೇಳೆಗೆ ಸ್ಥಳಕ್ಕೆ ದಾಳಿ ಮಾಡಿದ ಕಂಕನಾಡಿ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿರುವ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ತನಿಖೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದುಕೊಂಡು, ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಹೈಲ್ಯಾಂಡ್ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾದಿಂದ 15,000 ರೂ. ನಗದು ಕಳವು ಆಗಿರುವ ಬಗ್ಗೆ ಮಾಲೀಕರಾದ ಮಹಮ್ಮದ್ ರಿಯಾಝ್ ಪಾಂಡೇಶ್ವರ ಠಾಣೆ ದೂರು ನೀಡಿದ್ದಾರೆ. ಫೆ.13ರಂದು ಸಂಜೆ 4.30ಕ್ಕೆ ಆಸ್ಪತ್ರೆ ಬಳಿ ನಿಲ್ಲಿಸಿ ಆಸ್ಪತ್ರೆಯೊಳಗೆ ಹೋಗಿದ್ದಾರೆ. 6.45ರ ವೇಳೆಗೆ ವಾಪಾಸು ಬಂದು ನೋಡಿದಾಗ ಆಟೋದ ಡ್ಯಾಶ್ ಬೋರ್ಡ್ ತೆರೆದಿದ್ದು, ಅದರಲ್ಲಿದ್ದ ಹಣ ಕಳವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.