ತುಳು ಮಾನ್ಯತಾ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿ ಇಂದಿರಾ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್ ಮತ್ತಿತರರಿದ್ದರು.  
ದಕ್ಷಿಣ ಕನ್ನಡ

ದೈವ ಮಾತನಾಡುವವರೆಗೆ ತುಳುವಿಗೆ ಇರದು ತೊಂದರೆ

ತುಳು ಮಾನ್ಯತಾ ಸಂಭ್ರಮೊ ಕಾರ್ಯಕ್ರಮ

ಬೆಂಗಳೂರು: ಹೆತ್ತ ತಾಯಿಯನ್ನು ನಾವು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟೇ ಪ್ರೀತಿ ಸಾಕು ತಾಯಿಗೆ ಕೊಡುತ್ತೇವೆ. ದೈವಗಳು ಎಲ್ಲಿಯವರೆಗೆ ತುಳು ಮಾತನಾಡುತ್ತವೆಯೋ ಅಲ್ಲಿಯವರೆಗೆ ನಮ್ಮ ಭಾಷೆಗೆ ಯಾವುದೇ ತೊಂದರೆ ಆಗದು ಎಂದು ಸಾಹಿತಿ ಇಂದಿರಾ ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಬೆಂಗಳೂರು ಸರ್ವ ತುಳು ಸಂಘಟನೆಗಳ ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಭಾನುವಾರ 2025 ಮತ್ತು 2026ನೇ ಸಾಲಿನ ಪ್ರಶಸ್ತಿ ಪ್ರದಾನ, ತುಳು ಜಾನಪದ ವೈವಿಧ್ಯ ಮತ್ತು ತುಳು ಮಾನ್ಯತಾ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಶೆಟ್ಟಿ, ಡೋಲು ವಾದನ ಕಲಾವಿದ ಕುಡ್ಡು ಕೊರಗ ಪಾಂಗಾಳ, ರಂಗಭೂಮಿ ಮತ್ತು ಸಿನಿಮಾ ಕಲಾವಿದೆ ಉಷಾ ಭಂಡಾರಿ ಅವರಿಗೆ 2025ನೇ ಸಾಲಿನ ಹಾಗೂ ತುಳು ತಂತ್ರಾಂಶ ಮತ್ತು ಲಿಪಿ ತಜ್ಞ ಕಿನ್ನಿಕಂಬಳ ಪದ್ಮನಾಭ ರಾವ್, ದೈವನರ್ತಕ ನೇಮು ಪರವ ಕೆಯ್ಯೂರು, ರಂಗಭೂಮಿ ಮತ್ತು ಸಿನಿಮಾ ಕಲಾವಿದ ಸುಧಾಕರ ಬನ್ನಂಜೆ ಅವರಿಗೆ 2026ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುಸ್ತಕ ಬಹುಮಾನಿತರಾದ ಯಶೋದಾ ಮೋಹನ್, ಅಕ್ಷತಾರಾಜ್ ಪೆರ್ಲ, ಅಶೋಕ್ ಎನ್.ಕಡೇಶಿವಾಲಯ, ರೂಪಕಲಾ ಆಳ್ವ ಅವರನ್ನು ಪುರಸ್ಕರಿಸಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್, ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸಾಹಿತಿ ಇಂದಿರಾ ಹೆಗ್ಡೆ, ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, ತುಳು ಸಂಭ್ರಮ ಕೂಟದ ಅಧ್ಯಕ್ಷ ಪುರುಷೋತ್ತಮ ಚನಿಲ, ಬೆಂಗಳೂರು ತುಳುಕೂಟ ಅಧ್ಯಕ್ಷ ದಿನೇಶ್ ಹೆಗ್ಡೆ, ಭದ್ರಾವತಿ ಘಟಕ ಪ್ರಧಾನ ಕಾರ್ಯದರ್ಶಿ ಡಾ.ಹರೀಶ್ ಉಪಸ್ಥಿತರಿದ್ದರು. ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.