ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಬಲಿಪ ಪ್ರಸಾದ ಭಾಗವತರ ನೆನಪಿನಲ್ಲಿ ಆಯೋಜಿಸಲಾಗಿರುವ ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿಯ 11ನೇ ಕಾರ್ಯಕ್ರಮ ಭಾನುವಾರ ಹೊಸ್ಮಾರಿನ ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂದಿರದಲ್ಲಿ ಜರುಗಿತು.
ಶ್ರೀ ಅಯ್ಯಪ್ಪ ಭಕ್ತವೃಂದ ಮತ್ತು ಯಕ್ಷಬಳಗ ಹೊಸ್ಮಾರು ಆಯೋಜಿಸಿದ 12ನೇ ವರ್ಷದ ತಾಳಮದ್ದಳೆ ಕೂಟದ ಸಂದರ್ಭದಲ್ಲಿ ಈ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಬಲಿಪ ಪ್ರಸಾದ ಭಾಗವತರ ವಲಯದಲ್ಲಿ ಗುರುತಿಸಿಕೊಂಡಿರುವ ಹಿಮ್ಮೇಳ ವಾದಕ ರವಿರಾಜ್ ಜೈನ್ ಕಾರ್ಕಳ ಅವರಿಗೆ ಸರಣಿಯ 11ನೇ ಸನ್ಮಾನ ನೀಡಿ ಗೌರವಿಸಲಾಯಿತು.
ಉದ್ಯಮಿ ಪ್ರೇಮ್‌ಕುಮಾರ್ ಹೊಸ್ಮಾರು ಅಧ್ಯಕ್ಷತೆ ವಹಿಸಿದ್ದರು. ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿ ಅಧ್ಯಕ್ಷ ಬಿ. ದೇವಾನಂದ ಭಟ್ ಅವರು ಬಲಿಪ ಪ್ರಸಾದರ ಕುರಿತು ಸಂಸ್ಮರಣೆಗೈದರು.
ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ರುಕ್ಕಯ್ಯ ಪೂಜಾರಿ ಅಳಿಯೂರು, ಕೃಷಿ ತಜ್ಞ ರತ್ನಾಕರ ರಾವ್ ಹೊಳೆಹೊದ್ದು, ನಿವೃತ್ತ ಪೊಲೀಸ್ ಅಧಿಕಾರಿ ರಾಜಾರಾಮ್ ನಾಗರಕಟ್ಟೆ ಮುಖ್ಯ ಅತಿಥಿಗಳಾಗಿದ್ದರು.
ಶ್ರೀರಂಗ ಮಯ್ಯ ಸನ್ಮಾನಪತ್ರ ವಾಚಿಸಿದರು. ಹಿರಿಯ ಪತ್ರಕರ್ತ ಪದ್ಮಾಕರ ಭಟ್ ಅತಿಥಿಗಳನ್ನು ಗೌರವಿಸಿದರು. ಅಯ್ಯಪ್ಪ ಭಕ್ತ ವೃಂದದ ಅಧ್ಯಕ್ಷ ಅಳದಂಗಡಿ ರಾಜವರ್ಮ ಹೆಗ್ಡೆ ಕಾರ್ಯಕ್ರಮ ಸಂಯೋಜಿಸಿದರು. ಸರಣಿ ಕಾರ್ಯಕ್ರಮ ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಹರಿಪ್ರಸಾದ್ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.