Crime  
ದಕ್ಷಿಣ ಕನ್ನಡ

ಕಾರಿನಲ್ಲಿ ಎಂಡಿಎಂಎ, ಗಾಂಜಾ ಸಾಗಾಟ

ಮೂವರ ಬಂಧನ

ಕಾಸರಗೋಡು: ಎಂಡಿಎಂಎ ಸಾಗಿಸುತ್ತಿದ್ದ ಕಾರೊಂದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ತಮ್ಮ ವಾಹನವನ್ನು ಅಡ್ಡಲಾಗಿ ನಿಲ್ಲಿಸುತ್ತಿದ್ದಂತೆ, ಪರಾರಿಯಾಗಲು ಯತ್ನಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಸಮೀಪದ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಕಾರಿನಲ್ಲಿ 3.39 ಗ್ರಾಂ ಎಂಡಿಎಂಎ ಹಾಗೂ ಶೂನೊಳಗೆ ಅಡಗಿಸಿದ್ದ 6.060 ಗ್ರಾಂ ಗಾಂಜಾ ಪತ್ತೆಯಾಗಿದೆ. ಉಪ್ಪಳ ಮಂಚಲ್‌ನ ಅಯಾಜ್(35), ಬಪ್ಪಾಯಿ ತೊಟ್ಟಿಯ ಬಿ.ಎಂ.ಅಮೀರ್(43) ಮತ್ತು ಮಂಗಳಪಾಡಿ ಅಡುಕ್ಕಾದ ಉಮರ್ ಫಾರೂಕ್(35) ಎಂಬುವರನ್ನು ಬಂಧಿಸಲಾಗಿದೆ.

ಕಾಸರಗೋಡು ಕ್ಲಿನಿಕ್‌ನಲ್ಲಿ ಕಳವು

ಕಾಸರಗೋಡು: ನಗರದ ನಾಯಕ್ಸ್ ರಸ್ತೆಯಲ್ಲಿರುವ ಚರ್ಮರೋಗ ತಜ್ಞ ಡಾ.ನರಹರಿ ಅವರ ಕ್ಲಿನಿಕ್ ಬಾಗಿಲು ಹೊಡೆದು ನುಗ್ಗಿದ ಕಳ್ಳರು ನಗದು ಹಾಗೂ ಮೊಬೈಲ್ ಫೋನ್ ದೋಚಿದ್ದಾರೆ. ಕ್ಲಿನಿಕ್‌ನ ಕಪಾಟಿನಲ್ಲಿಟ್ಟಿದ್ದ 25 ಸಾವಿರ ರೂ. ನಗದು ಹಾಗೂ ಒಂದು ಮೊಬೈಲ್ ಫೋನ್ ಹಾಗೂ ಸಿಸಿ ಕ್ಯಾಮರಾ ಉಪಕರಣ ಕಳವಾಗಿದೆ. ಕ್ಲಿನಿಕ್‌ನ ಮಹಿಳಾ ಸಿಬ್ಬಂದಿ ಗುರುವಾರ ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಡಾ.ನರಹರಿ ನೀಡಿದ ದೂರಿನನ್ವಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುಎಇಯಲ್ಲಿ ಭೀಕರ ರಸ್ತೆ ಅಪಘಾತ

ಕಾಸರಗೋಡು: ಗಲ್ಫ್ ದೇಶ ಯುಎಇಯ ರಾಸ್ ಅಲ್ ಖೈಮಾದಲ್ಲಿ ಬಸ್ ಮತ್ತು ಟ್ರಕ್ ಡಿಕ್ಕಿಯಾಗಿ ಕಾಸರಗೋಡು ಮತ್ತು ಕಣ್ಣೂರು ನಿವಾಸಿಗಳೂ ಸೇರಿದಂತೆ ಒಟ್ಟು 11 ಮಂದಿ ಭಾರತೀಯರು ಮೃತಪಟ್ಟಿದ್ದಾರೆ.

ಕಾಸರಗೋಡು ಅಟ್ಟಯಂಗಾನಂ ನಿವಾಸಿ ಅಶ್ರಫ್(53), ತಲಶ್ಶೇರಿಯ ಸಂಕೀರ್ತನಾ ಸುರೇಶ್(26), ಮಟ್ಟನ್ನೂರಿನ ಹೇಮಂತ್ ಪುದಿಯಕಾವಿಲ್(29), ಪಾಲಕ್ಕಾಡ್ ನಿವಾಸಿ ಮಹಮ್ಮದ್ ಆಶಿಕ್(30) ಸೇರಿದಂತೆ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ, ಗುಜರಾತ್, ಉತ್ತರಪ್ರದೇಶ ನಿವಾಸಿಗಳೂ ಇದ್ದಾರೆ. ವೀಸಾ ಬದಲಾವಣೆಗಾಗಿ ಪ್ರಯಾಣಿಸುತ್ತಿದ್ದವರ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ 41 ಮಂದಿ ಪ್ರಯಾಣಿಕರಿದ್ದು 13 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ.

ಜೀವ ಬೆದರಿಕೆಯೊಡ್ಡಿದ ಇಬ್ಬರ ವಿರುದ್ಧ ಕೇಸ್

ಕಾಸರಗೋಡು: ಜೀವ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಲ್ಪಾಡಿ ಮಲ್ಲಂಗೈ ತಾಸಿನಾ ವಿಲ್ಲಾದ ಫಾತಿಮತ್ ಸುಹರಾ ಎಂಬುವರು ನೀಡಿದ ದೂರಿನಂತೆ ನೆರೆಮನೆ ನಿವಾಸಿಗಳಾದ ಸುಜಾತಾ ಮತ್ತು ಶ್ರದ್ಧಾ ಎಂಬಯವರ ವಿರುದ್ಧ ಕೇಸ್ ದಾಖಲಾಗಿದೆ. ನ.1ರಂದು ಬೆಳಗ್ಗೆ ತನ್ನ ಹಿತ್ತಲಿಗೆ ಅಕ್ರಮವಾಗಿ ನುಗ್ಗಿ, ರಸ್ತೆ ಬದಿಯಲ್ಲಿ ಗೋಡೆ ನಿರ್ಮಾಣಕ್ಕೆ ಈ ಇಬ್ಬರು ತಡೆಯೊಡ್ಡಿ ತನಗೆ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಐದು ಕೋಟಿ ರೂ. ಮೌಲ್ಯದ ಚರಸ್ ವಶ

ಕಾಸರಗೋಡು: ಎರ್ನಾಕುಲಂ ನೆಡುಂಬಾಶ್ಯೇರಿಯ ಹೋಟೆಲ್‌ವೊಂದಕ್ಕೆ ಪೊಲೀಸರು ದಾಳಿ ನಡೆಸಿ ಐದು ಕೋಟಿ ರೂ. ಮೌಲ್ಯದ ಎರಡೂವರೆ ಕೆ.ಜಿ. ಚರಸ್ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯ ನೀಲೇಶ್ವರ ಚೇರ್ಪರತ್ ಸಮೀಪದ ವೆಳ್ಳಿಕ್ಕೋತ್ ನಿವಾಸಿ ಮಹಮ್ಮದ್ ಸಿರಾಜುದ್ದೀನ್(25) ಎಂಬಾತನನ್ನು ಬಂಧಿಸಿದ್ದಾರೆ.

ಎರ್ನಾಕುಳಂ ಪೊಲೀಸರು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಡಾನ್ಸಾಪ್ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ. ಬಂಧಿತನನ್ನು ವಿಚಾರಣೆಗೊಳಪಡಿಸಿದಾಗ ಮಾರಕ ಚರಸನ್ನು ದೆಹಲಿಯಿಂದ ಖರೀದಿಸಿ ವಿಮಾನದಲ್ಲಿ ಮಂಗಳೂರಿಗೆ ಬಂದು ಅಲ್ಲಿಂದ ರೈಲಿನಲ್ಲಿ ತ್ರಿಶ್ಯೂರ್‌ಗೆ ತಲುಪಿ ಹೋಟೆಲ್‌ನಲ್ಲಿ ಕೊಠಡಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಆರೋಪಿಯ ಕಾಸರಗೋಡಿನ ಮನೆಯಲ್ಲೂ ತಪಾಸಣೆಗೆ ನೆಡುಂಬಾಶ್ಯೇರಿ ಪೊಲೀಸರು ಮುಂದಾಗಿದ್ದಾರೆ.