ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವುದು. 
ದಕ್ಷಿಣ ಕನ್ನಡ

ಟ್ರಾಫಿಕ್ ಜಾಮ್‌ಗೆ ಜನ ಹೈರಾಣ

ಸೌಮ್ಯ ಆರ್

ಪ್ರಮುಖ ಮುಖ್ಯಾಂಶಗಳು

  • ಬೆಳ್ತಂಗಡಿಯಲ್ಲಿ ವಾರದ ಸಂತೆ ದಿನದಂದು ತಪ್ಪದ ಕಿರಿಕಿರಿ
  • ಸಂತೆ ಜಾಗ ಸ್ಥಳಾಂತರಕ್ಕೆ ಮುಂದಾಗದ ಆಡಳಿತ ವರ್ಗ
  • ಹೆದ್ದಾರಿ ಬದಿಯಲ್ಲೇ ವ್ಯಾಪಾರ, ಕಾಮಗಾರಿಗೂ ಅಡ್ಡಿ
ಮನೋಹರ್ ಬಳಂಜ ಬೆಳ್ತಂಗಡಿ
ಬೆಳ್ತಂಗಡಿ ಪೇಟೆಯಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಹೆಚ್ಚುತ್ತಿದ್ದು, ಸಂತೆ ದಿನವಾದ ಸೋಮವಾರ ಪೇಟೆಯಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಅಲ್ಲದೆ ಹೆದ್ದಾರಿ ಕಾಮಗಾರಿಗೂ ಅಡ್ಡಿಯಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಸಂತೆ ಜಾಗವನ್ನು ಬೇರೆಡೆಗೆ ಸ್ಥಳಾಂತರಿಸಲು ಆಡಳಿತ ವರ್ಗ ಮುಂದಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳ್ತಂಗಡಿಯಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆ ಜನರಿಗೆ ಉಪಯೋಗಕ್ಕಿಂತ ಸಂಕಷ್ಟವನ್ನೇ ತಂದೊಡ್ಡಿದೆ. ಬಿ.ಸಿ.ರೋಡ್- ಕಡೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಂತೆಕಟ್ಟೆ ಪ್ರದೇಶದಲ್ಲಿ ವಾರದ ಸಂತೆ ನಡೆಯುತ್ತದೆ. ಸೋಮವಾರ ಒಂದು ದಿನಕ್ಕೆ ಸೀಮಿತವಾಗಿರುವ ಈ ಸಂತೆಯಲ್ಲಿ ತಾಲೂಕಿನ ರೈತರ ಸಹಿತ ವಿವಿಧ ಜಿಲ್ಲೆಯ ರೈತರು ತರಕಾರಿ, ನಿತ್ಯೋಪಯೋಗಿ ವಸ್ತುಗಳು, ಹಣ್ಣುಗಳನ್ನು ರಸ್ತೆ ಬದಿಯಲ್ಲೇ ಮಾರಾಟ ಮಾಡುತ್ತಾರೆ. ಸಂತೆ ಏಲಂ ಪಡೆದುಕೊಂಡವರು ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ದೂರುತ್ತಾರೆ.
ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಸಂತೆ ಪ್ರಾಂಗಣವಿದ್ದು, ನಿತ್ಯ ಅಂಗಡಿ ನಡೆಸುವವರು ಏಲಂ ಮೂಲಕ ಪಡೆದುಕೊಂಡು ಅಂಗಡಿ ನಡೆಸುತ್ತಿದ್ದಾರೆ. ಅದರ ಹೊರತಾಗಿ ವಾರದ ಸಂತೆ ದಿನ ನಾಲ್ಕೈದು ಅಂಗಡಿಗಳಿಗೆ ಮಾತ್ರ ಸ್ಥಳಾವಕಾಶ ಇದೆ. ಇದರಿಂದಾಗಿ ಅನಿವಾರ್ಯವಾಗಿ ಸಂತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನಡೆಯುತ್ತಿದೆ.
ಹೆದ್ದಾರಿ ಕಾಮಗಾರಿಗೂ ಅಡಚಣೆ: ಪುಂಜಾಲಕಟ್ಟೆಯಿಂದ ಚಾರ್ಮಾಡಿ ತಕನದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಪ್ರಸ್ತುತ ಬೆಳ್ತಂಗಡಿ ಸಂತೆಕಟ್ಟೆ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದೇ ವೇಳೆ ವಾರದ ಸಂತೆಯೂ ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಜತೆಗೆ ರಸ್ತೆ ಕಾಮಗಾರಿಗೂ ಅಡಚಣೆಯಾಗಿದೆ.
ಸಂತೆಕಟ್ಟೆ ಸಮೀಪವಿರುವ ಮಾರಿಗುಡಿ ಮೈದಾನ.

ಗುಡಿ ಮೈದಾನಕ್ಕೆ ಸ್ಥಳಾಂತರಿಸಲು ಆಗ್ರಹ
2018ರಲ್ಲಿ ಅಂದಿನ ತಹಸೀಲ್ದಾರ್ ಆಗಿದ್ದ ಗಣಪತಿ ಶಾಸ್ತ್ರಿ ಅವರು ಟ್ರಾಫಿಕ್ ಜಾಮ್ ಸಮಸ್ಯೆ ಅರಿತು ವಾರದ ಸಂತೆಯನ್ನು ವಾಣಿ ಕಾಲೇಜು ಸಮೀಪದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದರು. ಅಲ್ಲಿ ಸಂತೆ ನಡೆಯುತ್ತಿದ್ದಾಗ ಟ್ರಾಫಿಕ್ ಜಾಮ್ ಸಮಸ್ಯೆ ಇರಲಿಲ್ಲ. ಆದರೆ ತಹಸೀಲ್ದಾರ್ ವರ್ಗಾವಣೆಯಾಗಿ ಹೋಗದ ಬಳಿಕ ವ್ಯಾಪಾರ ಕುಂಠಿತದ ನೆಪವೊಡ್ಡಿ ಸಂತೆಯನ್ನು ಏಕಾಏಕಿ ವಾಪಸ್ ಸಂತೆಕಟ್ಟೆಗೆ ವರ್ಗಾಯಿಸಲಾಯಿತು. ಸಂತೆಕಟ್ಟೆ ಸಮೀಪವೇ ಮಾರಿಗುಡಿ ಮೈದಾನವಿದ್ದು, ಇಲ್ಲಿಗೆ ಸಂತೆಯನ್ನು ಸ್ಥಳಾಂತರ ಮಾಡಿದರೆ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.