ವಿಜಯವಾಣಿ ಸುದ್ದಿಜಾಲ ಕುಂಬಳೆ
ಕುಂಬಳೆಯಲ್ಲಿ ಜಾರಿಗೊಳಿಸಲಾದ ಹೊಸ ಸಂಚಾರ ನಿಯಮ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಖಾಸಗಿ ಬಸ್ ಸಿಬ್ಬಂದಿ ನಡುವಿನ ಸಂಷರ್ಕ್ಕೆ ಕಾರಣವಾಗಿದೆ. ಸಂಚಾರ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ಯೂಟರ್ನ್ ಅನ್ನು ಪಂಚಾಯಿತಿ ಅಧಿಕಾರಿಗಳು ಮತ್ತು ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಮುಚ್ಚಿದ್ದಾರೆ.
ಬದಿಯಡ್ಕ, ಸೀತಾಂಗೋಳಿ, ಪೆರ್ಲ ಹಾಗೂ ಪೇರಾಲ್ ಕಣ್ಣೂರು ಭಾಗಗಳಿಂದ ಬರುವ ಬಸ್ಗಳು ಹಳೆಯ ಬಸ್ ನಿಲ್ದಾಣದ ಸಮೀಪ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು ಮತ್ತು ಇಳಿಸಬೇಕು ಎಂಬುದು ಕುಂಬಳೆ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಆರ್ಟಿಒ ಇಲಾಖೆಯ ಸೂಚನೆಯಾಗಿದೆ. ಆದರೆ ಈ ನಿಯಮ ಪಾಲಿಸಲು ಬಸ್ ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೊಸ ಸಂಚಾರ ವ್ಯವಸ್ಥೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಳೆದ ಆರು ತಿಂಗಳಿನಿಂದ ಪಂಚಾಯಿತಿ ಆಡಳಿತ ಮಂಡಳಿ, ಕುಂಬಳೆ ಪೊಲೀಸರು ಮತ್ತು ಬಸ್ ಸಿಬ್ಬಂದಿ ನಡುವೆ ಜಟಾಪಟಿ ನಡೆಯುತ್ತಿದೆ. ಸಮಸ್ಯೆ ಪರಿಹಾರಕ್ಕಾಗಿ ಹಲವು ಸಭೆಗಳನ್ನು ನಡೆಸಿದರೂ ಒಮ್ಮತ ಮೂಡಿಲ್ಲ. ಪಂಚಾಯಿತಿ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದರೆ, ಬಸ್ ಸಿಬ್ಬಂದಿ ಹಳೆಯ ಬಸ್ ನಿಲ್ದಾಣಕ್ಕೆ ತೆರಳಲು ನಿರಾಕರಿಸುತ್ತಿದ್ದಾರೆ.
ಬಸ್ ಸಿಬ್ಬಂದಿ ಅಧಿಕಾರಿಗಳ ಸೂಚನೆಯನ್ನು ಪಾಲಿಸದ ಹಿನ್ನೆಲೆಯಲ್ಲಿ ಹೊಸ ಬಸ್ ತಂಗುದಾಣದ ಸಮೀಪದ ಯೂಟರ್ನ್ ಮುಚ್ಚಲಾಗಿದೆ. ಇದರಿಂದ ಬದಿಯಡ್ಕ ಭಾಗದಿಂದ ಬರುವ ಬಸ್ಗಳು ಹೊಸ ಬಸ್ ತಂಗುದಾಣ ತಲುಪಲು ಹಳೆಯ ಬಸ್ ನಿಲ್ದಾಣದ ವೃತ್ತದವರೆಗೆ ತೆರಳಿ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ವಾಣವಾಗಿದೆ. ಈ ಕ್ರಮಕ್ಕೆ ಬಸ್ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಹೊಸ ಸಂಚಾರ ವ್ಯವಸ್ಥೆಗೆ ವ್ಯಾಪಾರಿಗಳ ಯುವ ಟಕ ಬೆಂಬಲ ವ್ಯಕ್ತಪಡಿಸಿದೆ.
ಕಾಸರಗೋಡು-ತಲಪಾಡಿ ವಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ಗಳು ಹಾಗೂ ಕೆಎಸ್ಆರ್ಟಿಸಿ ಬಸ್ಗಳು ಹೊಸ ಬಸ್ ತಂಗುದಾಣಕ್ಕೆ ಹೋಗಲು ಅನಿಲ್ ಕುಂಬಳೆ ರಸ್ತೆಯ ಸಮೀಪದ ಯೂಟರ್ನ್ ಬಳಸುತ್ತಿವೆ.
ತಲಪಾಡಿ-ಕಾಸರಗೋಡು ಭಾಗದಿಂದ ಬರುವ ಬಸ್ಗಳು ಹೊಸ ತಂಗುದಾಣಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡ ಬಳಿಕ ಹಳೆಯ ಬಸ್ ನಿಲ್ದಾಣದ ಸಮೀಪದಲ್ಲಿಯೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ಹೀಗಾಗಿ ಬದಿಯಡ್ಕ ಭಾಗದಿಂದ ಬರುವ ಬಸ್ ಸಿಬ್ಬಂದಿ ವಾತ್ರ ಸಂಚಾರ ವ್ಯವಸ್ಥೆಯ ನಿಯಮ ಪಾಲಿಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬುದು ಪಂಚಾಯಿತಿ ಅಧಿಕಾರಿಗಳ ಪ್ರಶ್ನೆಯಾಗಿದೆ. ವಿವಾದ ಹೀಗೇ ಮುಂದುವರಿದರೆ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಬಸ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದು ಕುಂಬಳೆಯಲ್ಲಿ ಸಂಚಾರ ವ್ಯವಸ್ಥೆಯ ವಿವಾದ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಸಂಚಾರ ಸುಧಾರಣೆಗೆ ಸಂಬಂಧಿಸಿದಂತೆ ಪಂಚಾಯಿತಿ ಆಡಳಿತ ಮಂಡಳಿ ಕೈಗೊಂಡ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂಬ ಒತ್ತಡ ಹೆಚ್ಚಾಗಿದೆ. ಈ ಹಿಂದೆ ಮೋಟಾರು ವಾಹನ ಇಲಾಖೆ ಬಸ್ ಸಿಬ್ಬಂದಿಗೆ ನೋಟಿಸ್ಗಳನ್ನೂ ನೀಡಿತ್ತು. ಆದರೂ ನಿಯಮ ಪಾಲನೆಗೆ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕೆಎಸ್ಟಿಪಿ ರಸ್ತೆಯಾಗಿದ್ದರೂ ಇದರ ನಿರ್ವಹಣೆಯ ಹೊಣೆಗಾರಿಕೆ ಪಂಚಾಯಿತಿಗೆ ಇರುವುದರಿಂದ ಪಂಚಾಯಿತಿ ಕೈಗೊಂಡ ನಿರ್ಧಾರವನ್ನು ಗೌರವಿಸಬೇಕು ಎನ್ನುತ್ತಾರೆ ವ್ಯಾಪಾರಿಗಳು ಮತ್ತು ನಗರವಾಸಿಗಳು.
ಕುಂಬಳೆ ಪೇಟೆಯಲ್ಲಿ ಗ್ರಾ.ಪಂ. ಆಡಳಿತ ಹಾಗೂ ಖಾಸಗಿ ಬಸ್ಗಳ ನಡುವಿನ ವಿವಾದ ಇನ್ನಾದರೂ ಕೊನೆಯಾಗಬೇಕು. ಬಸ್ ಸಿಬ್ಬಂದಿ ಅಧಿಕಾರಿಗಳ ನಿರ್ದೇಶನ ಪಾಲಿಸುವುದು ಉತ್ತಮ. ಇಬ್ಬರ ಜಗಳದಲ್ಲಿ ಬಡವಾದ ಕೂಸಿನಂತೆ ಜನರಿಗೆ ತೊಂದರೆಯಗದಂತೆ ಕ್ರಮ ಕೈಗೊಳ್ಳಬೇಕು. ಸಂಘರ್ಷ ಕೊನೆಯಾಗದಿದ್ದರೆ ಅಂತಿಮ ತೀರ್ವಾನವನ್ನು ಪ್ರಯಾಣಿಕರೇ ಕೈಗೊಳ್ಳಬೇಕಾಗುತ್ತದೆ.ಯೋಗೀಶ್ ಕುವಾರ್ ದೇವಿನಗರ ಕುಂಬಳೆ ನಿವಾಸಿ