ಕಡಬ ಪಪಂ ಸಭಾಂಗಣದಲ್ಲಿ ತಮನ್ನಾ ಜಬೀನ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಪಪಂ ಮುಖ್ಯಾಧಿಕಾರಿ ಲೀಲಾವತಿ ಇ., ಸದಸ್ಯರಾದ ದಯಾನಂದ ಪಿಜಕ್ಕಳ, ಅಕ್ಷತಾ ಬಾಲಕೃಷ್ಣ, ಫೈಝಲ್ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಪಪಂ ಸಿಬ್ಬಂದಿ ಕಡತವೇ ಕಾಣೆ !

ಸಂಬಳ ಪಾವತಿ ವಿಳಂಬದ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿದ್ದಾಗ ವಿಚಾರ ಬೆಳಕಿಗೆ

ಕಡಬ: ಗುತ್ತಿಗೆ ಆಧಾರದಲ್ಲಿ ಕಡಬ ಪಟ್ಟಣ ಪಂಚಾಯಿತಿಗೆ ನೇಮಕಗೊಂಡಿದ್ದ ಸಿಬ್ಬಂದಿಯ ಕಡತ ಕಾಣೆಯಾಗಿರುವ ವಿಚಾರದ ಕುರಿತು ಶನಿವಾರ ಕಡಬ ಪಪಂ ಸಭಾಂಗಣದಲ್ಲಿ ಅಧ್ಯಕ್ಷೆ ತಮನ್ನಾ ಜಬೀನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

3 ತಿಂಗಳ ಹಿಂದೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಅವರಿಗೆ ಈ ತನಕ ಯಾವುದೇ ಸಂಬಳ ನೀಡಿಲ್ಲ ಯಾಕೆ ಎಂದು ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಹನೀಫ್ ಪ್ರಶ್ನಿಸಿದರು. ಈ ಸಂದರ್ಭ ಸಿಬ್ಬಂದಿಗೆ ಸಂಬಂಧಪಟ್ಟ ಕಡತವೇ ಕಾಣೆಯಾಗಿರುವ ವಿಚಾರ ಬೆಳಕಿಗೆ ಬಂತು.

ಸದಸ್ಯ ಸೈಮನ್ ಸಿ.ಜೆ. ಮಾತನಾಡಿ, ಕಡಬ ಪಪಂಯಲ್ಲಿ ನಡೆಯುವ ಗೊಂದಲಕ್ಕೆ ತೆರೆ ಎಳೆಯಬೇಕಾದರೆ ಮುಖ್ಯಾಧಿಕಾರಿ ಮೊದಲು ಸರಿಯಾಗಬೇಕು. ಪಪಂನಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರು ಸರಿ ಇದ್ದಾರೆ. ಆದರೆ ಅಧಿಕಾರಿ-ಸಿಬ್ಬಂದಿಯೇ ಸರಿ ಇಲ್ಲ. ಒಂದು ವಾರದೊಳಗೆ ಸಿಬ್ಬಂದಿಗೆ ಸಂಬಳ ನೀಡುವ ಕೆಲಸ ಆಗಬೇಕು ಎಂದರು.

ಭಾನುವಾರ ಕಡತದ ಹುಡುಕಾಟ

ಸದಸ್ಯರ ಆಗ್ರಹದ ಮೇರೆಗೆ ಅಧ್ಯಕ್ಷೆ ತಮನ್ನಾ ಜಬೀನ್ ಭಾನುವಾರ ಕಡತ ಹುಡಕಲು ತೀರ್ಮಾನ ಕೈಗೊಂಡರು. ಪಪಂ ಸ್ಥಾಯಿ ಸಮಿತಿ ಅವಧಿ ಮುಗಿದಿದ್ದು, ನೂತನ ಸಮಿತಿ ರಚನೆಗೆ ವಿಶೇಷ ಸಭೆ ನ.7ರಂದು ನಡೆಸುವುದಾಗಿ ತಿಳಿಸಿದರು.

ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಪಪಂ ಮುಖ್ಯಾಧಿಕಾರಿ ಲೀಲಾವತಿ ಇ., ಸದಸ್ಯರಾದ ದಯಾನಂದ ಪಿಜಕ್ಕಳ, ಅಕ್ಷತಾ ಬಾಲಕೃಷ್ಣ, ಕೃಷ್ಣಪ್ಪ ಪೂಜಾರಿ, ಸೈಮನ್ ಸಿ.ಜೆ., ಕುಸುಮಾ, ಕೃಷ್ಣಪ್ಪ ನಾಯ್ಕ, ಗುಣವತಿ, ಮೋಹನ, ರೋಹಿತ್, ನಾಮ ನಿರ್ದೇಶಿತ ಸದಸ್ಯರಾದ ಫಝಲ್ ಕೋಡಿಂಬಾಳ, ಶಾಲಿನಿ ಸತೀಶ್ ನಾಕ್, ಮೋಹನ್‌ದಾಸ್, ಇಂಜಿನಿಯರ್ ಶಿವಕುಮಾರ್, ಸಿಬ್ಬಂದಿ ಹರೀಶ್, ಬಾಲಕೃಷ್ಣ ಕತ್ತಲ್‌ಸಾರ್, ಶಶಿಕಲಾ, ರಿಯಾಝ್ ಉಪಸ್ಥಿತರಿದ್ದರು.

ಜಿಲ್ಲಾ ಯೋಜನಾಧಿಕಾರಿ ಭೇಟಿಗೆ ಆಗ್ರಹ

20 ವರ್ಷಗಳಿಂದ ಒಂದೇಕಡೆ ಬೀಡುಬಿಟ್ಟಿರುವ ಸಿಬ್ಬಂದಿಯನ್ನು ಮೊದಲು ವರ್ಗಾವಣೆ ಮಾಡಬೇಕು. ಈ ಬಗ್ಗೆ ಹಿಂದೆಯೂ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅನುಷ್ಠಾನಗೊಂಡಿಲ್ಲ. ಜಿಪಂ ಅಧಿಕಾರಿಗಳಿಗೆ ಕಡಬದಲ್ಲಿ ಪಪಂ ಇದೆ ಎಂಬ ಮಾಹಿತಿಯೇ ಇಲ್ಲ ಎಂದು ಕಾಣುತ್ತದೆ. ಒಂದು ವರ್ಷದಿಂದ ಕನಿಷ್ಠ ಜಿಲ್ಲಾ ಯೋಜನಾಧಿಕಾರಿ ಕೂಡಾ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಕೆ.ಎಂ.ಹನೀಫ್ ಕಡಬ ಆಕ್ರೋಶ ವ್ಯಕ್ತಪಡಿಸಿದರು.

ನಕಲಿ ಸಹಿ ಪ್ರಕರಣ

ನಾನು ರಜೆಯಲ್ಲಿದ್ದರೂ ನನ್ನ ನಕಲಿ ಸಹಿ ಹಾಕಲಾಗುತ್ತಿದೆ ಎಂದು ಇಂಜಿನಿಯರ್ ಶಿವಕುಮಾರ್ ಹೇಳಿದರು. ನಾಮನಿರ್ದೇಶಿತ ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ, ಸಿಬ್ಬಂದಿಗೆ ಸಂಬಂಧಿಸಿದ ಕಡತ ಕಾಣೆಯಾಗುವುದಾದರೆ ಜನರು ಕೊಟ್ಟ ಅರ್ಜಿಯ ಗತಿ ಏನು? ಇದರ ನಡುವೆ ಇಂಜಿನಿಯರ್ ಸಹಿ ನಕಲು ಮಾಡಲಾಗುತ್ತದೆ ಎಂದಾದರೆ ಇದಕ್ಕೆ ಅರ್ಥ ಏನು. ಅಧಿಕಾರಿ-ಸಿಬ್ಬಂದಿ ವರ್ಗ ಅಧ್ಯಕ್ಷರಿಗೆ ಯಾಕೆ ಸಹಕಾರ ನೀಡುತ್ತಿಲ್ಲ. ಅಧ್ಯಕ್ಷರು ಯಾಕೆ ತಮ್ಮ ಅಧಿಕಾರ ಚಲಾಯಿಸುತ್ತಿಲ್ಲ ಎಂದು ಪ್ರಶ್ನಿಸಿದರು.