ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಸ್ಥಳೀಯ ಸಮಾನ ಮನಸ್ಕರ ಒಕ್ಕೂಟ ಶುಕ್ರವಾರ ಸೂರಲ್ಪಾಡಿ ಹೆದ್ದಾರಿಯಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತು. ಪ್ರಮುಖರಾದ ಮುನೀರ್ ಕಾಟಿಪಳ್ಳ, ಹರಿಪ್ರಸಾದ್, ನೋಣಯ್ಯ ಮೊದಲಾದವರಿದ್ದರು.  
ದಕ್ಷಿಣ ಕನ್ನಡ

ನಿಯಮಬಾಹಿರ ಟೋಲ್ ಸಂಗ್ರಹ ಬೇಡ : ಮುನೀರ್ ಕಾಟಿಪಳ್ಳ

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮದಂತೆ 60 ಕಿ.ಮೀ. ಅಂತರದಲ್ಲಿ ಟೋಲ್ ಗೇಟ್ ನಿರ್ಮಿಸಬಹುದು. ಆದರೆ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ವಳಾಲು, ಬೆಳ್ತಂಗಡಿ ಸಮೀಪದ ಪಣಕಜೆ ಹಾಗೂ ಗುರುಪುರ ಸಮೀಪದ ಸೂರಲ್ಪಾಡಿಯಲ್ಲಿ ಎನ್‌ಎಚ್ ನಿಯಮ ಮೀರಿ ಟೋಲ್ ಗೇಟ್ ನಿರ್ಮಿಸಲಾಗುತ್ತಿದೆ. ಬ್ರಹ್ಮರಕೂಟ್ಲು ಟೋಲ್‌ನಿಂದ ವಳಾಲಿಗೆ 34 ಕಿಮೀ, ಬ್ರಹ್ಮರಕೂಟ್ಲುವಿನಿಂದ ಪಣಕಜೆಗೆ 27 ಕಿಮೀ, ಗುರುಪುರದಿಂದ ಬ್ರಹ್ಮರಕೂಟ್ಲುವಿಗೆ 34 ಕಿಮೀ, ಗುರುಪುರದಿಂದ ತಲಪಾಡಿಗೆ 34 ಕಿಮೀ, ಗುರುಪುರದಿಂದ ಹೆಜಮಾಡಿಗೆ 44 ಕಿಮೀ ಅಂತರವಿದೆ ಎಂದು ವಿವರಿಸಿದರು.
ಭಾರತೀಯ ರೈತ ಸೇನೆ ಮೂಡುಬಿದಿರೆ ಅಧ್ಯಕ್ಷ ಹರಿಪ್ರಸಾದ್ ಮಾತನಾಡಿ, ಟೋಲ್ ಗೇಟ್ ನಿರ್ಮಿಸಲು ನಮ್ಮ ವಿರೋಧವಿಲ್ಲ. ಆದರೆ ಅದು ಕಾನೂನು ಚೌಕಟ್ಟಿನಲ್ಲಿರಬೇಕು. ಜನಸಾಮಾನ್ಯರು, ಮಧ್ಯಮ ವರ್ಗದವರಿಗೆ ತೊಂದರೆ ಉಂಟು ಮಾಡುವ ಟೋಲ್ ಗೇಟ್‌ಗಳು ಬೇಡವೇ ಬೇಡ ಎಂದರು.

ಸುಲಿಗೆಯ ಗೇಟ್

ಜನರ ವಿರೋಧವನ್ನೂ ಲೆಕ್ಕಿಸದೆ ಕಾನೂನುಬಾಹಿರ ನಿರ್ಮಿಸುತ್ತಿರುವ ಇಂತಹ ಟೋಲ್ ಗೇಟ್‌ಗಳ ಉದ್ದೇಶ ‘ಸುಲಿಗೆ’ಯಲ್ಲದೆ ಮತ್ತೇನು ? ಕಾರ್ಕಳದಲ್ಲಿ ಟೋಲ್‌ಗೇಟ್ ನಿರ್ಮಿಸುವ ಪ್ರಸ್ತಾಪ ಜನರ ವಿರೋಧಕ್ಕೆ ಸ್ಥಗಿತಗೊಂಡಿದೆ. ಆದರೆ ಇಲ್ಲಿ ಯಶಸ್ವಿಯಾದರೆ ಕ್ರಮೇಣ ಕಾರ್ಕಳದಲ್ಲೂ ಟೋಲ್ ಗೇಟ್ ಸ್ಥಾಪನೆಯಾದಲ್ಲಿ ಅಚ್ಚರಿಪಡಬೇಕಿಲ್ಲ. ಹೆದ್ದಾರಿಯ ಹಲವೆಡೆ ಇರುವ ಹಲವು ಜಟಿಲ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದ ಸರ್ಕಾರಗಳು ಬೇಕಾಬಿಟ್ಟಿ ಟೋಲ್ ಗೇಟ್ ಸ್ಥಾಪಿಸಿ ಜನರಿಂದ ಸುಲಿಗೆ ಮಾಡುವುದರಲ್ಲಿ ಕಾಲ ಕಳೆಯುತ್ತಿದೆ. ಟೋಲ್‌ನಿಂದ ಬಸ್ ಟಿಕೆಟ್ ಏರಲಿದೆ. ಹೋಟೆಲ್‌ಗಳು ದುಬಾರಿಯಾಗಲಿವೆ. ದೊಡ್ಡ ಮಟ್ಟದ ಹೋರಾಟ ನಡೆಯದೆ ಹೋದಲ್ಲಿ ಜನರ ಧ್ವನಿ ಸರ್ಕಾರಗಳು ಅಥವಾ ಜಿಲ್ಲಾಡಳಿತಕ್ಕೆ ಕೇಳಿಸದು ಎಂದು ಮುನೀರ್ ಹೇಳಿದರು.