ಮಂಗಳೂರು: ಬೆಂಗಳೂರು ನಗರದಿಂದ ಮಾದಕವಸ್ತು ಎಂಡಿಎಂಎ ಖರೀದಿಸಿ ತಂದು ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸಿದ ಮೂವರನ್ನು ನಗರ ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಬಸ್ತಿಪಡ್ಪು ಬಳಿಯ ನಿವಾಸಿ ಮುಸ್ತಫಾ ಸೀದಿಯಬ್ಬ (34), ಉಳ್ಳಾಲ ಮಾಸ್ತಿಕಟ್ಟೆ ಜಂಕ್ಷನ್, ಕಟ್ಟಿಗೆ ಡಿಪೋ ಹಿಂದುಗಡೆ ನಿವಾಸಿ ಮೈಯದ್ದಿ (28), ಉಳ್ಳಾಲ ಮುಕ್ಕಚೇರಿಯ ಮೊಹಮ್ಮದ್ ಶಿಫಾನ್ (28) ಬಂಧಿತರು.
ಬೆಂಗಳೂರು ನಗರದಿಂದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಖರೀದಿಸಿಕೊಂಡು ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೂದು ಬಣ್ಣದ ಸ್ವೀಪ್ಟ್ ಕಾರಿನಲ್ಲಿ ಉಳ್ಳಾಲ ತಾಲೂಕಿನ ತಲಪಾಡಿಯ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಆರೋಪಿಗಳ ವಶದಿಂದ 11,90,000 ರೂ. ಮೌಲ್ಯದ 118.13 ಗ್ರಾಂ ತೂಕದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ, ಮೊಬೈಲ್ ಫೋನ್-4, ಬೂದು ಬಣ್ಣದ ಸ್ವೀಪ್ಟ್ ಕಾರು ಸಹಿತ ಒಟ್ಟು 17,95,000 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮುಸ್ತಫಾ ಸೀದಿಯಬ್ಬ ಎಂಬಾತನ ಮೇಲೆ ಈ ಹಿಂದೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ಮತ್ತು ಮೈಯದ್ದಿ ಎಂಬಾತನ ಮೇಲೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.
ಈ ಮಾದಕವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಈ ಮಾದಕ ವಸ್ತು ಎಂಡಿಎಂಎ ಮಾರಾಟ/ಸಾಗಾಟದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.