ಮಂಗಳೂರು: ಪರಸ್ಪರ ಹೊಂದಾಣಿಕೆಯ ಕೊರತೆಯಿಂದ ಉಂಟಾದ ಸಮಸ್ಯೆಯಿಂದ 10 ವರ್ಷಗಳ ವೈವಾಹಿಕ ಜೀವನದಿಂದ ವಿಚ್ಛೇದನಕ್ಕೆ ಮುಂದಾಗಿದ್ದ ಜೋಡಿಯೊಂದು ನ್ಯಾಯಾಧೀಶರ ಎದುರು ಹಾರ ಬದಲಾಯಿಸಿಕೊಂಡು, ಸಿಹಿ ತಿನ್ನಿಸುವ ಮೂಲಕ ಮತ್ತೆ ದಾಂಪತ್ಯ ಜೀವನಕ್ಕೆ ಮುಂದಾದ ಪ್ರಸಂಗಕ್ಕೆ ಮಂಗಳೂರು ನ್ಯಾಯಾಲಯ ಸಾಕ್ಷಿಯಾಯಿತು.
ದ.ಕ. ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಲಾದ ಲೋಕ ಅದಾಲತ್‌ನಲ್ಲಿ ಮಂಗಳೂರಿನ ಈ ಜೋಡಿ ನ್ಯಾಯಾಧೀಶರಾದ ಲಕ್ಷ್ಮೀ ನಾರಾಯಣ ಭಟ್ ಅವರ ಸಮ್ಮುಖದಲ್ಲಿ ರಾಜೀ ಸಂಧಾನದ ಮೂಲಕ ದಾಂಪತ್ಯ ಜೀವನದಲ್ಲಿ ಮುಂದುವರಿಯಲು ಒಪ್ಪಿಕೊಂಡಿದ್ದಾರೆ.
ಪುಟ್ಟ ಮಗುವನ್ನೂ ಹೊಂದಿರುವ ಜೋಡಿಯ ದಾಂಪತ್ಯದಲ್ಲಿ ಕಾಣಿಸಿಕೊಂಡ ಬಿರುಕಿನಿಂದ ಕಳೆದ ಮೂರು ವರ್ಷಗಳಿಂದ ಬೇರ್ಪಟ್ಟಿದ್ದರು. ತನ್ನ ಹಾಗೂ ಮಗುವಿನ ಭವಿಷ್ಯದ ದೃಷ್ಟಿಯಿಂದ ಜೀವನಾಂಶಕ್ಕೆ ಪರಿಹಾರ ನೀಡುವಂತೆ ಕೋರಿ ಪತ್ನಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಲೋಕ ಅದಾಲತ್‌ನಲ್ಲಿ ರಾಜಿಯೊಂದಿಗೆ ತಮ್ಮ ವೈವಾಹಿಕ ಜೀವನ ಮುಂದುವರಿಸಲು ಒಪ್ಪಿಕೊಂಡಿರುವುದಾಗಿ ನ್ಯಾಯ ಸಂಧಾನ ನಡೆಸಿರುವ ನ್ಯಾಯಾಧೀಶರು ತಿಳಿಸಿದ್ದಾರೆ. ಲೋಕ ಅದಾಲತ್‌ನಲ್ಲಿ ಈ ದಿನ ಇಂತಹ ಮೂರು ವಿಚ್ಚೇದನ ಪ್ರಕರಣಗಳು ರಾಜೀ ಸಂಧಾನಕ್ಕೆ ನಿಗದಿಯಾಗಿದ್ದು, ಎರಡು ಪ್ರಕರಣಗಳು ಬಗೆಹರಿದಿವೆ ಎಂದು ಹಿರಿಯ ಜಿಲ್ಲಾ ನಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ತಿಳಿಸಿದ್ದಾರೆ.
ಲೋಕ ಅದಾಲತ್‌ನಲ್ಲಿ ಶನಿವಾರ ಚೆಕ್ ಬೌನ್ಸ್ ಪ್ರಕರಣ, ಮೋಟಾರು ವಾಹನ ಅಪಘಾತ ವಿಮೆ ಪ್ರಕರಣ ಸೇರಿದಂತೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಹಾಗೂ ಸುಳ್ಯ ನ್ಯಾಯಾಲಯಗಳ ಆವರಣದಲ್ಲಿ ರಾಜಿ ಮಾಡಬಹುದಾದ ಸುಮಾರು 4000ದಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲು ಕೈಗೆತ್ತಿಕೊಳ್ಳಲಾಗಿದೆ ಎಂದು ನ್ಯಾ.ಜೈಬುನ್ನಿಸಾ ತಿಳಿಸಿದ್ದಾರೆ.