ಧನಂಜಯ ಗುರುಪುರ
ಬಜ್ಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಂಚಾರು ಗ್ರಾಮದ ಧೂಮಾವತಿ ಧಾಮ 10ನೇ ಅಡ್ಡ ರಸ್ತೆಯ ಬಳಿ 2025ರ ಜುಲೈನಲ್ಲಿ ಸಂಭವಿಸಿದ ಭಾರಿ ಗುಡ್ಡ ಕುಸಿತದಿಂದ ಜಖಂಗೊಂಡಿದ್ದ ಮನೆಗಳ ನಿವಾಸಿಗಳು ಈಗ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ದುರಂತದ ಬಳಿಕ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿದ್ದ 6 ಕುಟುಂಬಗಳಿಗೆ 4 ತಿಂಗಳಿನಿಂದ ಬಾಡಿಗೆ ಹಣ ಸ್ಥಗಿತಗೊಂಡಿದ್ದು, ಸ್ವಂತ ಮನೆಯೂ ಇಲ್ಲದೆ, ಬಾಡಿಗೆ ಕಟ್ಟಲೂ ಆಗದೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ವಸತಿ ಬಡಾವಣೆಯ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಅತಿ ಎತ್ತರದ ಗುಡ್ಡ ಕುಸಿದಿತ್ತು. ಇದರಿಂದ ಕೆಲವು ಮನೆಗಳ ಗೋಡೆಗಳು ಕುಸಿದಿದ್ದರೆ, ಒಟ್ಟು 8 ಮನೆಗಳ ಒಳಗೆ ಭಾರಿ ಪ್ರಮಾಣದ ಮಣ್ಣು ತುಂಬಿಕೊಂಡಿತ್ತು. ಅಪಾಯದಲ್ಲಿದ್ದ ಈ ಕುಟುಂಬಗಳು ಜಿಲ್ಲಾಡಳಿತ, ಶಾಸಕ ಉಮಾನಾಥ ಕೋಟ್ಯಾನ್, ಸ್ಥಳೀಯಾಡಳಿತ ಹಾಗೂ ಎಸ್ಇಜಡ್ ಪ್ರತಿನಿಧಿಗಳ ಭರವಸೆ ಮೇರೆಗೆ ತಕ್ಷಣ ಮನೆ ಖಾಲಿ ಮಾಡಿ ಬಜ್ಪೆಯ ಮುರ, ಸುಂಕದಕಟ್ಟೆ ಹಾಗೂ ಪಡುಪೆರಾರದ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿದ್ದರು.
ದುರಂತದ ಬಳಿಕ ಸ್ಥಳ ಪರಿಶೀಲನೆ ನಡೆಸಿದ್ದ ಎನ್ಐಟಿಕೆ ತಜ್ಞರ ತಂಡ, ಈ ಪ್ರದೇಶವು ಜೇಡಿ ಮಣ್ಣಿನಿಂದ ಕೂಡಿದ್ದು, ನೀರಿನ ಒರತೆ ಹೆಚ್ಚಿರುವುದರಿಂದ ವಸತಿ ಬಡಾವಣೆಗೆ ಯೋಗ್ಯವಲ್ಲ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರಿಹಾರವಾಗಿ ಎಸ್ಇಝಡ್ ಮೂಲಕ 6 ಕುಟುಂಬಗಳಿಗೆ ಬಾಡಿಗೆ ಮೊತ್ತವನ್ನು ಮಂಜೂರು ಮಾಡಲಾಗಿತ್ತು. ಆರಂಭದಲ್ಲಿ ಸರಿಯಾಗಿ ಬರುತ್ತಿದ್ದ ಬಾಡಿಗೆ ಹಣ ಕಳೆದ 4 ತಿಂಗಳಿನಿಂದ ನಿಂತು ಹೋಗಿರುವುದು ಸಂತ್ರಸ್ತರನ್ನು ಕಂಗಾಲಾಗಿಸಿದೆ.
ಮುಂದಿನ ಮಳೆಗಾಲ ಆರಂಭವಾಗುವ ಮುನ್ನವೇ ಶಾಸಕರು, ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತ ಇತ್ತ ಗಮನಹರಿಸಿ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ನ್ಯಾಯ ಒದಗಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ಜಿಲ್ಲಾಡಳಿತದ ಸೂಚನೆಯಂತೆ ಇದುವರೆಗೆ ಎಸ್ಇಜಡ್ನಿಂದ ಬಾಡಿಗೆ ಹಣ ಬರುತ್ತಿತ್ತು. ಅದು ಸ್ಥಗಿತಗೊಂಡ ಸಂದರ್ಭದಲ್ಲಿ ನಾನೇ ಬಾಡಿಗೆ ಮೊತ್ತ ಭರಿಸಿದ್ದೆ. ಆದರೆ ಮುಂದೆ ಬಾಡಿಗೆ ನೀಡಲು ಸಾಧ್ಯವಿಲ್ಲ ಎಂಬುದನ್ನು ಸಂತ್ರಸ್ತರಿಗೆ ತಿಳಿಸಿದ್ದೇನೆ. ಬಾಡಿಗೆ ಭರಿಸಲು ಸಾಧ್ಯವಾಗದವರು ಬೇಸಿಗೆ ಕಾಲದಲ್ಲಿ ಹಳೆಯ ಮನೆಗಳಿಗೆ ತೆರಳಿ ವಾಸ್ತವ್ಯ ಹೂಡಬಹುದು ಎಂದು ಬಜ್ಪೆ ಪಪಂ ಅಧ್ಯಕ್ಷ ಲೋಕೇಶ್ ಪೂಜಾರಿ ತಿಳಿಸಿದ್ದಾರೆ.
ಜಿಲ್ಲಾಡಳಿತ ನೀಡಿದ ಭರವಸೆಯಂತೆ ಬಾಡಿಗೆ ಮೊತ್ತವನ್ನು ಮುಂದುವರಿಸಬೇಕು. ತಜ್ಞರ ವರದಿಯಂತೆ ಮನೆಗಳು ಅಪಾಯದಲ್ಲಿದ್ದರೆ ನಾವು ಬೇರೆಡೆಗೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ. ಆದರೆ ಇಂದಿನ ದುಬಾರಿ ಕಾಲದಲ್ಲಿ ಹೊಸ ಜಾಗ ಖರೀದಿಸಿ ಮನೆ ಕಟ್ಟುವುದು ಅಸಾಧ್ಯ. ಆದ್ದರಿಂದ ಸರ್ಕಾರ ನಮಗೆ ಬದಲಿ ಜಾಗದೊಂದಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸುಂಕದಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಿರುವ ಸಂತ್ರಸ್ತೆ ಜಯಂತಿ (ಜಯಂತಿ, ಮೋಹಿನಿ ಹಾಗೂ ಸತೀಶ್ ಪೂಜಾರಿ ಕುಟುಂಬಗಳು) ಅಳಲು ತೋಡಿಕೊಂಡಿದ್ದಾರೆ.
ಕುಸಿದ ಗುಡ್ಡದ ಮಣ್ಣು ತೆರವುಗೊಳಿಸಿ ಸುಮಾರು 5 ತಿಂಗಳ ಹಿಂದೆ ಅಂದಾಜು 90 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಮಣ್ಣಿನ ಒತ್ತಡ ತಡೆಯಲಾಗದೆ ತಡೆಗೋಡೆ ಈಗ ಸಂಪೂರ್ಣ ಬಿರುಕು ಬಿಟ್ಟಿದ್ದು, ಮತ್ತೊಂದು ದುರಂತಕ್ಕೆ ಆಹ್ವಾನ ನೀಡುವಂತಿದೆ. ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಮುಂದಿನ ಮಳೆಗಾಲದಲ್ಲಿ ಭಾರಿ ಮಳೆಯಾದರೆ ತಡೆಗೋಡೆ ಸಹಿತ ಗುಡ್ಡ ಕುಸಿದು ಸುತ್ತಮುತ್ತಲಿನ 15ರಿಂದ 20 ಮನೆಗಳು ಬೀದಿಪಾಲಾಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.
ಧೂಮಾವತಿ ಧಾಮ 10ನೇ ಅಡ್ಡ ರಸ್ತೆಯ ವಸತಿ ಬಡಾವಣೆ ಅಪಾಯ ಎದುರಿಸುತ್ತಿರುವುದು ಗಮನದಲ್ಲಿದೆ. 6 ತಿಂಗಳ ಹಿಂದೆ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಿಡಿಒ ನೇತೃತ್ವದ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಎನ್ಐಟಿಕೆ ಹಾಗೂ ಲೋಕೋಪಯೋಗಿ ಇಂಜಿನಿಯರ್ಗಳನ್ನು ಒಳಗೊಂಡ ಸಮಿತಿ ಈಗಾಗಲೇ ವರದಿ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಲಿದೆ. ಅಂತಿಮ ಸುತ್ತಿನ ಮಾತುಕತೆಯ ಬಳಿಕ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು.ಲೋಕೇಶ್ ಪೂಜಾರಿ ಬಜ್ಪೆ ಪಟ್ಟಣ ಪಂಚಾಯಿತಿ ಅಧ್ಯಕ್ಷ