ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಖುಲಾಸೆಗೊಂಡಿದ್ದ ಕಳ್ಳನಿಗೆ ಜಿಲ್ಲಾ ನ್ಯಾಯಾಲಯದಲ್ಲಿ 10 ವರ್ಷ ಶಿಕ್ಷೆ

ಮಂಗಳೂರು : ಬಂಟ್ವಾಳ ತಾಲೂಕು ಬಾಳೇಪುಣಿ ಗ್ರಾಮದ ಕಣಂತೂರು ಎಂಬಲ್ಲಿ ದೈವಸ್ಥಾನ ಮತ್ತು ಭಂಡಾರ ಮನೆಯಲ್ಲಿ ಕಳವು ಮಾಡಿ ಕೆಳ ನ್ಯಾಯಾಲಯದಲ್ಲಿ ಖುಲಾಸೆ ಗೊಂಡಿದ್ದ ಕಳ್ಳನಿಗೆ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತ ನ್ಯಾಯಾಲಯ 10 ವರ್ಷ ಕಠಿನ ಜೈಲು ಶಿಕ್ಷೆ ಮತ್ತು 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಉಳ್ಳಾಲ ಹಳೇ ಮನೆ ಕಲ್ಲಾಪು ಕಟ್ಟೆಪುಣಿಯ ಅಬ್ದುಲ್ ಬಶೀರ್ ಅಲಿಯಾಸ್ ಕಳ್ಳ ಬಶೀರ್ (36) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ವಿವರ:
2009ರ ಫೆ.27ರಂದು ರಾತ್ರಿ 1.30ರ ವೇಳೆಗೆ ಕಣಂತೂರು ಎಂಬಲ್ಲಿನ ಶ್ರೀ ಕ್ಷೇತ್ರ ತೋಡಕುಕ್ಕಿನಾರ್ ದೈವಸ್ಥಾನದ ಬಾಗಿಲಿನ ಬೀಗವನ್ನು ಕಬ್ಬಿಣದ ಲಿವರ್‌ನಿಂದ ಮುರಿದು ಒಳಪ್ರವೇಶಿಸಿ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಕಳವು ಮಾಡಿದ್ದ. ಬಳಿಕ ದೈವಸ್ಥಾನದ ಪಕ್ಕದಲ್ಲಿರುವ ಭಂಡಾರ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ, ಒಳಭಾಗದಲ್ಲಿರುವ ದೈವದ ಕೋಣೆಯ ಬಾಗಿಲಿನ ಬೀಗವನ್ನು ಮುರಿದು 1.20 ಲಕ್ಷ ರೂ. ಮೌಲ್ಯದ 100 ಗ್ರಾಂ. ತೂಕದ ಬಂಗಾರ, 120 ಗ್ರಾಂ ತೂಕದ ಬೆಳ್ಳಿಯನ್ನು ಹೊಂದಿರುವ 2 ಕಿರುವಾಳ (ಖಡ್ಗ), 145 ಗ್ರಾಂ. ತೂಕದ ಬಂಗಾರದ ಹೊದಿಕೆ ಇರುವ ಕಬ್ಬಿಣದ ಬಾಣ, ಸುಮಾರು 7,000 ರೂ. ಮೌಲ್ಯದ 260 ಗ್ರಾಂ. ತೂಕದ ಬೆಳ್ಳಿಯ ಕಲಶ, 6,000 ರೂ. ಮೌಲ್ಯದ 250 ಗ್ರಾಂ.ತೂಕದ ಬೆಳ್ಳಿಯ ಶಿವನ ಪ್ರತಿಮೆಯ ಸತ್ತಿಗೆ (ಬೆಳ್ಳಿಯ ಹೂ), 2,000 ರೂ. ಮೌಲ್ಯದ 75 ಗ್ರಾಂ.ತೂಕದ ಬೆಳ್ಳಿಯ ದುರ್ಗಾಲಯ ಮೂರ್ತಿಯ ಸತ್ತಿಗೆ, ಕಾಣಿಕೆ ಡಬ್ಬಿಯಲ್ಲಿದ್ದ 2,000 ರೂ. ಕಳವು ಮಾಡಿದ್ದ. ಬಳಿಕ ಇದನ್ನು ಎರಡನೇ ಆರೋಪಿಗೆ ಮಾರಿದ್ದು, ಆತ ಕಳ್ಳತನದ ಸೊತ್ತು ಎಂದು ಗೊತ್ತಿದ್ದರೂ ಸ್ವೀಕರಿಸಿದ್ದ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣವು ಬಂಟ್ವಾಳದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ನ್ಯಾಯಾಲಯ ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು.
ಅಭಿಯೋಜನೆಯಿಂದ ಮೇಲ್ಮನವಿ
ಬಿಡುಗಡೆ ಆದೇಶದ ವಿರುದ್ಧ ಅಭಿಯೋಜನೆಯು ಮೇಲ್ಮನವಿ ಸಲ್ಲಿಸಿದ್ದು, ಮೇಲ್ಮನವಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ನ್ಯಾಯಾಲಯ ಅಭಿಯೋಜನೆಯ ಹಾಗೂ ಆರೋಪಿತನ ಪರ ವಾದ ಪ್ರತಿವಾದವನ್ನು ಆಲಿಸಿ ಆರೋಪಿ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದೆ.
ಆ.28ರಂದು ನ್ಯಾಯಾಧೀಶರಾದ ಮೋಹನ ಜೆ. ಎಸ್. ಅವರು ಅಬ್ದುಲ್ ಬಶೀರ್ ಅಲಿಯಾಸ್ ಕಳ್ಳ ಬಶೀರ್ ಗೆ ಭಾರತೀಯ ದಂಡ ಸಂಹಿತೆ ಕಲಂ 457ರಡಿ 10 ವರ್ಷಗಳ ಕಾಲ ಕಠಿನ ಶಿಕ್ಷೆ ಮತ್ತು 20,000 ರೂ ದಂಡ, ಕಲಂ: 380ರಡಿ 7 ವರ್ಷಗಳ ಕಾಲ ಕಠಿನ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದ್ದಾರೆ.
ಈತ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ಅಪರಾಧ ಎಸಗಿದ್ದು, ಆತನಿಗೆ ಎರಡು ಪ್ರಕರಣಗಳಲ್ಲಿ ಶಿಕ್ಷೆಯಾಗಿತ್ತು. ಶಿಕ್ಷೆ ಅನುಭವಿಸಿದ ಅನಂತರ ಈ ಕಳ್ಳತನ ಮಾಡಿದ್ದ. ಹಾಗಾಗಿ ಆತನಿಗೆ ಭಾ.ದಂ.ಸಂಹಿತೆ ಕಲಂ: 75 ರಡಿ 10 ವರ್ಷಗಳ ಕಾಲ ಕಠಿನ ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿದ್ದಾರೆ. ಪ್ರಕರಣದ 2ನೇ ಆರೋಪಿ ಮೃತಪಟ್ಟಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ಅವರು ಮೇಲ್ಮನವಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.