ಮಂಗಳೂರು: ಐಷಾರಾಮಿ ಜೀವನಕ್ಕಾಗಿ ನಗರದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾದ ದ್ವಿಚಕ್ರ ಕಳವು ಮಾಡುತ್ತಿದ್ದ 7ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರು 18-19ವರ್ಷ ಆಸುಪಾಸಿನವರಾದರೆ, ಉಳಿದ ಮೂವರು ಅಪ್ರಾಪ್ತರು.
ವಾಮಂಜೂರು ಮೂಡುಶೆಡ್ಡೆ ನಿವಾಸಿ ಮಹಮ್ಮದ್ ಸಿಯಾಮ್ (19) ತೋಕೂರು ಬೈಕಂಪಾಡಿ ನಿವಾಸಿ ಮುಹಮ್ಮದ್ ನಾಸ್ೀ (19), ಮೂಡುಶೆಡ್ಡೆ ಶಿವನಗರ ನಿವಾಸಿ ಮೊಹಮ್ಮದ್ ರಾಹೀಲ್ (18), ತಿರುವೈಲು ಕುಟ್ಟಿಪಲ್ಕೆ ನಿವಾಸಿ ನಿಖಿಲ್ (18) ಪ್ರಕರಣದ ಆರೋಪಿಗಳು. ಅಪ್ರಾಪ್ತ ಮೂವರು ಆರೋಪಿಗಳಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ.
ಪ್ರಕರಣ ವಿವರ: ಅ.12ರಂದು ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ ಜಂಕ್ಷನ್ ಬಳಿಯಿರುವ ಡಾನ್ ಬಾಸ್ಕೋ ಹಾಸ್ಟೇಲ್ ಬಳಿ ಕೆಟಿಎಮ್ ಡ್ಯೂಕ್ ಮೋಟಾರು ಸೈಕಲ್, ಅ.19ರಂದು ಜಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಯಮಹಾ ಎ್.ಜೆಡ್ ಮೋಟಾರ್ ಸೈಕಲ್, ಅ.21ರಂದು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಬಳಿಯಿರುವ ದುರ್ಗಾ ಹೋಟೇಲ್ ಮುಂದೆ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್, ಅ.22ರಂದು ಹೊಯಿಗೆ ಬಜಾರ್ ಭಗವತಿ ಅಪಾರ್ಟಮೆಂಟ್ ಕೆಳಗೆ ನಿಲ್ಲಿಸಿದ್ದ ಕೆಟಿಎಂ ಡ್ಯೂಕ್ ಬೈಕ್ ಕಳವಾಗಿತ್ತು. ಅ.18ರಂದು ಅದೇ ರೀತಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಳಿ ನಿಲ್ಲಿಸಲಾಗಿದ್ದ ರಾಯಲ್ ಎನ್ ಪೀಲ್ಡ್ ಬುಲೆಟ್ ಮೋಟಾರ್ ಸೈಕಲ್, ಅ.21ರಂದು ಕುತ್ತಾರ್ ಪಂಡಿತ್ ಹೌಸ್ ಬಳಿ ನಿಲ್ಲಿಸಲಾಗಿದ್ದ ಯಮಹಾ ಎ್.ಜೆಡ್ ಮೋಟಾರ್ ಸೈಕಲ್ ಕಳವಾಗಿತ್ತು. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿತ್ತು.
ವಿಶೇಷ ತಂಡ ರಚನೆ: ಕಳವಾಗಿರುವ ದ್ವಿಚಕ್ರ ವಾಹನಗಳ ಆರೋಪಿಗಳ ಪತ್ತೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ನಿರ್ದೇಶನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಸದರಿ ತಂಡವು ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸುವ ಮೂಲಕ ಒಟ್ಟು 7 ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಬೈಂದೂರ್ರವರ ನೇತೃತ್ವದಲ್ಲಿ ಪಿಎಸ್ಐ ಮಾರುತಿ ಹಾಗೂ ಕ್ರೈಂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್ ಅವರು ಭಾಗವಹಿಸಿದ್ದು, ಮಂಗಳೂರು ದಕ್ಷಿಣ ಠಾಣಾ ಅಧಿಕಾರಿ ಸಿಬ್ಬಂದಿ ಪತ್ತೆ ಕಾರ್ಯಕ್ಕೆ ಸಹಕರಿಸಿದ್ದರು.
ಬಂಧಿತ ಆರೋಪಿಗಳೆಲ್ಲರೂ 16-19ವರ್ಷದ ವಯಸ್ಸಿನವರಾಗಿದ್ದಾರೆ. ಈ ವಯಸ್ಸಿನಲ್ಲೇ ತಮ್ಮ ಶೋಕಿ ಜೀವನ ನಡೆಸಲು ಕಳ್ಳತನದ ಹಾದಿ ಹಿಡಿದಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳಿಂದ ಎಲ್ಲ 6 ದ್ವಿಚಕ್ರ ವಾಹನಗಳನ್ನು, ಮತ್ತು ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ4.50ಲಕ್ಷ ರೂ. ಆಗಿದೆ.
ಆರೋಪಿಗಳು ಬೈಕ್ ಕಳ್ಳತನ, ಸರಗಳ್ಳತನ ಕೃತ್ಯವೆಸಗುತ್ತಿದ್ದರು. ಬೆಲೆಬಾಳುವ ಮೋಟಾರ್ ಸೈಕಲ್ಗಳನ್ನು ಗುರಿಯಾಗಿಸಿ, ನಿಲುಗಡೆ ಮಾಡಿದ್ದ ಸ್ಥಳಗಳಿಂದ ಕಳವು ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತನಿಖೆಯಿಂದ ತಿಳಿದು ಬಂದಿದೆ. ಬಂಧಿತ 4 ಜನ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.