ಸಂದೀಪ್ ಸಾಲ್ಯಾನ್ ಬಂಟ್ವಾಳ
ಆಡಳಿತ ಪಕ್ಷದಿಂದ ವಿವಿಧ ಜನಪರ ಯೋಜನೆಗಳ ವಿಧೇಯಕ ಮಂಡನೆ, ವಿಪಕ್ಷದಿಂದ ಪ್ರಶ್ನೆಗಳ ಸುರಿಮಳೆ, ಶಾಸಕರ ಪ್ರಶ್ನೆಗೆ ಜವಬ್ದಾರಿಯುತವಾಗಿ ಉತ್ತರಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವ, ಕಂದಾಯ ಸಚಿವ, ಶಿಕ್ಷಣ ಸಚಿವ ಸಹಿತ ಮಂತ್ರಿ ಮಂಡಲ, ತಾಲೂಕಿನ ಸಮಸ್ಯೆಗಳನ್ನು ಮುಂದಿಟ್ಟು ಪರಿಹಾರಕ್ಕೆ ಪಟ್ಟುಹಿಡಿದ ವಿಪಕ್ಷದ ನಾಯಕರು, ಅಸಮರ್ಪಕ ಉತ್ತರಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ಸದಸ್ಯರು, ಸಾರ್ವಜನಿಕ ಹಿತಾಸಕ್ತಿ ವಿಚಾರಗಳು, ಪರವಿರೋಧ ಚರ್ಚೆಗಳು... ಹೀಗೆ ಚುನಾಯಿತ ಜನಪ್ರತಿನಿಧಿಗಳೇ ನಿಬ್ಬೆರಗಾಗುವಾಗುವಂತೆ ಸಮರ್ಥವಾಗಿ ವಿಷಯ ಮಂಡಿಸಿ ಸೈ ಎನಿಸಿಕೊಂಡು ಸಂಸದೀಯ ಅಧಿವೇಶನದಲ್ಲಿ ಭಾಗವಹಿಸಿದ್ದ ಬಂಟ್ವಾಳ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ(ಸೆ.15)ದ ಅಂಗವಾಗಿ ಸಂಸತ್ತಿನ ಮಾದರಿಯಲ್ಲೇ ‘ಯುವ ಸಂಸತ್’ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಕಲಾಪ ಆರಂಭಕ್ಕೂ ಮುನ್ನ, ಸಭಾಪತಿಯಾಗಿ ಆಯ್ಕೆಯಾದ ಭುವನೇಶ್ವರ ಅವರ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಜ್ಯೋತಿ ಬೆಳಗಲಾಯಿತು.
ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ವಕೀಲರ ಸಂಘದ ಕಾರ್ಯದರ್ಶಿ ನರೇಂದ್ರನಾಥ ಭಂಡಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯಾ ಕುಮಾರಿ, ತಾಪಂ ಕಚೇರಿ ಅಧೀಕ್ಷಕ ಪ್ರಕಾಶ್, ವಕೀಲರಾದ ಅಬ್ದುಲ್ ಹಾಗೂ ಶಿಕ್ಷಣ ಸಂಯೋಜಕಿ ಪ್ರತಿಮಾ ಉಪಸ್ಥಿತರಿದ್ದರು. ಸಿದ್ದಕಟ್ಟೆ ಸರ್ಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಡಾ.ಹರಿಣಾಕ್ಷಿ ಮತ್ತು ವಾಮದಪದವು ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ರೋಹಿಣಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಯುವ ಸಂಸತ್‌ನಲ್ಲಿ ಪ್ರಮುಖವಾಗಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ ತಡೆ’ ಹಾಗೂ ‘ಪರಿಸರ ಸಂರಕ್ಷಣೆ’ ಮಸೂದೆಗಳನ್ನು ಮಂಡಿಸಲಾಯಿತು. ಪದವಿ ಶಿಕ್ಷಣ ಮುಗಿದರೂ ಉದ್ಯೋಗ ಸಿಗದೆ ಯುವಕರು ಕೂಲಿ ಕೆಲಸ ಮಾಡುವಂತಾಗಿದ್ದು ಸೂಕ್ತ ಉದ್ಯೋಗಾವಕಾಶ ಕಲ್ಪಿಸಲು ಆಗ್ರಹಿಸಲಾಯಿತು. ಸ್ವಚ್ಛ ಪರಿಸರದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿ ಸಚಿವರು, ಬಂಟ್ವಾಳದ ನರಿಕೊಂಬುವಿನಲ್ಲಿ ಎಂಆರ್‌ಎಫ್ ಘಟಕ ಸ್ಥಾಪಿಸಿರುವುದಾಗಿ ತಿಳಿಸಿದರು.
ಎಚ್ಚರಿಕೆ ಫಲಕ ಹಾಕಿದರೂ ಕಸ ಎಸೆಯುವ ಪ್ರವೃತ್ತಿ ಮುಂದುವರಿದಿರುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಬಿ.ಸಿ.ರೋಡ್‌ನಲ್ಲಿ 21 ವರ್ಷದ ಯುವತಿಯ ಹತ್ಯೆ ಸೇರಿದಂತೆ ಮಹಿಳೆಯರ ರಕ್ಷಣೆ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣದ ಕುರಿತು ಕಳಕಳಿ ವ್ಯಕ್ತವಾಯಿತು. ಪೊಲೀಸ್ ಇಲಾಖೆಗೆ ಸ್ವತಂತ್ರ ಜವಾಬ್ದಾರಿ ನೀಡಲಾಗಿದೆ ಎಂದು ಮುಖ್ಯಮಂತ್ರಿಯಾಗಿದ್ದ ವಿದ್ಯಾರ್ಥಿ ಸ್ಪಷ್ಟನೆ ನೀಡಿದರು.
ಗಂಭೀರ ಚರ್ಚೆಗೆ ಗ್ರಾಸವಾದ ಸಮಸ್ಯೆಗಳು: ಮಹಿಳೆ ಮತ್ತು ಪುರುಷರಿಗೆ ಸಮಾನ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷದ ನಡುವೆ ವಾದ-ವಿವಾದ ನಡೆಯಿತು. ಮಂಗಳೂರಿನಿಂದ ಬಿ.ಸಿ.ರೋಡಿಗೆ ತೆರಳುವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಅವ್ಯವಸ್ಥೆ, ಅಂಗವಿಕಲರಿಗೆ ಗುಣಮಟ್ಟದ ಶಿಕ್ಷಣ, ಬಂಟ್ವಾಳದಲ್ಲಿ ಹೆಚ್ಚುತ್ತಿರುವ ಅಪಘಾತಗಳು ಹಾಗೂ ರಸ್ತೆ ಸುರಕ್ಷತೆ ಕುರಿತು ಚರ್ಚಿಸಲಾಯಿತು. ಸರ್ಕಾರಿ ಶಾಲೆಗಳ ಶೌಚಗೃಹಗಳ ನಿರ್ವಹಣೆ, ಬಸ್ ನಿಲ್ದಾಣಗಳ ಸಮಸ್ಯೆ, ಶಾಲಾ ಮಕ್ಕಳಲ್ಲಿ ಮಾದಕ ದ್ರವ್ಯ ವ್ಯಸನ ತಡೆ, ಉಪನ್ಯಾಸಕರ ಕೊರತೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಹಾಗೂ ಆಸ್ಪತ್ರೆ ನಿರ್ವಹಣೆ ಕುರಿತು ಗಂಭೀರ ಚರ್ಚೆಗಳು ನಡೆದವು.
ತಾಲೂಕಿನ ಆರು ಕಾಲೇಜುಗಳಿಂದ ಒಟ್ಟು 82 ಮಂದಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಕಾಮಾಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭುವನೇಶ್ವರ ಸಭಾಧ್ಯಕ್ಷರಾಗಿ ಕಲಾಪವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. ಬಿ ಮೂಡ ಕಾಲೇಜಿನ ಪುನೀತ್ ಮುಖ್ಯಮಂತ್ರಿಯಾಗಿ ಮತ್ತು ಕಾಮಾಜೆ ಕಾಲೇಜಿನ ನವ್ಯಶ್ರೀ ವಿಪಕ್ಷ ನಾಯಕಿಯಾಗಿ ಗಮನ ಸೆಳೆದರು. ಇವರೊಂದಿಗೆ ಸಂದೀಪ್, ವೇದ್ಯಶ್ರೀ, ಗುಳಮ್ಮ, ನವ್ಯಾ, ಆಶಾ, ರಮ್ಲತ್, ಸಾಜಿದಾ ಬಾನು, ಅಕ್ಷತಾ, ಪ್ರಿಯದರ್ಶಿನಿ, ಘೋಟೆಸಾಬ್, ಹರಿರಾಜ್, ಶೋಭಾ, ಶ್ರುತಿ, ಅಕ್ಷಯ, ಯಶಸ್ವಿನಿ, ರಶ್ಮಿತಾ ಹಾಗೂ ಅಂಜಲಿ ಸೇರಿದಂತೆ ಹಲವು ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಮಾತನಾಡಿ ಸಂಸತ್ ಕಲಾಪಕ್ಕೆ ಮೆರುಗು ತಂದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಯುವ ಸಂಸತ್‌ಗೆ ಭೇಟಿ ನೀಡಿ ಕೆಲಹೊತ್ತು ವಿದ್ಯಾರ್ಥಿ ಸಂಸದರ ಕಲಾಪವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರ ಮುಂದೆಯೇ ವಿದ್ಯಾರ್ಥಿಗಳು ತಮ್ಮ ವಾಕ್‌ಚಾತುರ್ಯ ಪ್ರದರ್ಶಿಸಿ ಭೇಷ್ ಎನಿಸಿಕೊಂಡರು. ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆ, ವಿಧೇಯಕ ಮಂಡನೆ ಹೀಗೆ ಎಲ್ಲ ಹಂತಗಳಲ್ಲೂ ವಿದ್ಯಾರ್ಥಿ ಸಂಸದರು ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.