ಮೂಲ್ಕಿ: ಯುವ ಸಮಾಜಕ್ಕೆ ಆತ್ಮಬೋಧನೆ ಸರಿಯಾಗಿ ಲಭ್ಯವಾಗದ ಕಾರಣ ವಿಶ್ವಬೋಧನೆ ದಿಕ್ಕುತಪ್ಪುತ್ತಿದೆ. ಯುವ ಜನತೆಗೆ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಮಾಗದರ್ಶನ ತೀರಾ ಅವಶ್ಯಕವಾಗಿದೆ. ಸಾಹಿತ್ಯ ಸಭೆಗಳಿಗೆ ಜನರು ನಿರಾಸಕ್ತರಾಗುತ್ತಿದ್ದಾರೆ. ಅದರ ಪ್ರತಿಸ್ಪಂದನದ ಬಗ್ಗೆ ನಾವು ಅತ್ಮಾವಲೋಕನ ನಡೆಸುವ ಅವಶ್ಯಕತೆ ಇದೆ ಎಂದು ಲೇಖಕಿ ಹಾಗೂ ವಿದ್ವಾಂಸೆ ಡಾ.ವೀಣಾ ಬನ್ನಂಜೆ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ಆತ್ಮಬೋಧೆಯಿಂದ ವಿಶ್ವಬೋಧೆಯೆಡೆಗೆ ಧ್ಯೇಯದೊಂದಿಗೆ ನಡೆದ ಜಿಲ್ಲಾ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಪೂರ್ವ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಶ್ಯಾಮಲಾತನಯ ಸಂಪಾದಕತ್ವದ ಕಾಲುಚಕ್ರ ಮತ್ತು ಪಾದಮಂಡಲ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಸರ್ಕಾರದ ಕನ್ನಡ ಪರ ನೀತಿಯ ಗೊಂದಲದಿಂದ ಸಾಹಿತ್ಯ ಕೃಷಿ ಕ್ಷೀಣಿಸಿದೆ. ಆದಾಗ್ಯೂ ಹಿರಿಯ ಸಾಹಿತಿಗಳು ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಬೆಳೆಸಲು ಕಾರ್ಯಸೂಚಿ ಹಮ್ಮಿಕೊಳ್ಳಬೇಕು ಎಂದರು.
ಅಭಾಸಾಪಕದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣೇಶ್ ಅಡಿಗ ಪ್ರಸ್ತಾವಿಸಿದರು. ವಿಜಯಲಕ್ಷ್ಮೀ ಕಟೀಲು ನಿರ್ವಹಿಸಿದರು.
ಸಂಸ್ಕೃತ ಸಾಹಿತ್ಯದಲ್ಲಿ ವಿಶ್ವಬೋಧೆ ಕುರಿತು ಮಂಗಳೂರು ಕೆನರಾ ಪ.ಪೂ. ಕಲೇಜು ಉಪನ್ಯಾಸಕ ಡಾ.ಮಧುಕೇಶ್ವರ ಶಾಸ್ತ್ರಿ, ಕನ್ನಡ ಸಾಹಿತ್ಯದಲ್ಲಿ ವಿಶ್ವಬೋಧೆ ಕುರಿತು ಲೇಖಕ ರೋಹಿತ್ ಚಕ್ರತೀರ್ಥ, ತುಳು ಸಾಹಿತ್ಯ ವಿಶ್ವಭೋಧೆ ಕುರಿತು ಯಕ್ಷಗಾನ ಗುರು ದೀವಿತ್ ಎಸ್.ಕೆ.ಪೆೆರಾಡಿ ಸಾಹಿತ್ಯ ಗೋಷ್ಠಿ ನೆರವೇರಿಸಿಕೊಟ್ಟರು. ಅನಿತಾ ಶೆಟ್ಟಿ ಮೂಡುಬಿದಿರೆ ನಿರ್ವಹಿಸಿದರು. ನೃತ್ಯಗುರು ವಿದುಷಿ ಸುಮಂಗಲಾ ರತ್ನಾಕರ ರಾವ್ ಶಿಷ್ಯವೃಂದದಿಂದ ನೃತ್ಯವರ್ಣ ಕಾರ್ಯಕ್ರಮ ನಡೆಯಿತು.
ಹಿರಿಯ ಸಾಹಿತಿ ಶ್ರೀಧರ ಡಿ.ಎಸ್.ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ 27 ಸಾಹಿತಿಗಳು ಕವನ ವಾಚಿಸಿದರು.
ಸಮಾರೋಪ ಸಮಾರಂಭದಲ್ಲಿ ಅ.ಭಾ.ಸಾ.ಪ.ಕ. ಪೂರ್ವಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಪ್ರೊ.ಪ್ರೇಮಶೇಖರ್ ಸಮಾರೋಪ ಭಾಷಣಗೈದರು. ಜಿಲ್ಲಾ ಸಮಿತಿಯ ಅಧ್ಯಕ್ಷೆ ವೀಣಾ ಟಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.