ಉಳ್ಳಾಲ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ರಸಾ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ ಉಳ್ಳಾಲ ತಾಲೂಕಿನ ವಿವಾಹಿತ ಧರ್ಮಗುರು ಅದೇ ಊರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಊರಿಗೆ ಮರಳಿದ್ದಾರೆ. ಮಗಳ ಹುಡುಕಾಟದಲ್ಲಿ ಬಂದ ಹೆತ್ತವರು ಕಣ್ಣೀರು ಹಾಕಿದರೂ ಯುವತಿ ಅವರೊಂದಿಗೆ ಹೋಗಲು ಒಪ್ಪದ ಕಾರಣ ಪೊಲೀಸರು ಕಾನೂನು ಪ್ರಕಾರ ಮುಚ್ಚಳಿಕೆ ಬರೆಸಿ ಆಕೆಯ ಇಚ್ಛೆಯಂತೆ ಬಿಟ್ಟು ಕಳುಹಿಸಿದ ಪ್ರಕರಣ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟಗುಳಿ ನಿವಾಸಿ ದಾವುದ್ ಖಾಸಿಂ ಎಂಬುವರ 22 ವರ್ಷದ ಪುತ್ರಿ ಹಾಗೂ ಉಳ್ಳಾಲ ತಾಲೂಕಿನ ಅಸೈಗೋಳಿ ನಿವಾಸಿ, ಧರ್ಮಗುರು ಅಶ್ರ್ ಸಅದಿ(40) ಮದುವೆಯಾದ ಜೋಡಿ. ವಿವಾಹಿತರಾಗಿ ಮಕ್ಕಳನ್ನುಹೊಂದಿರುವ ಅಶ್ರ್ ಸಅದಿ ಹಲವು ವರ್ಷಗಳಿಂದ ಬೆಟಗುಳಿಯ ಮದ್ರಸಾದಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ ಯುವತಿಯನ್ನು 3 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಇಬ್ಬರೂ ರಹಸ್ಯವಾಗಿ ಮದುವೆ ಮಾಡಿಕೊಂಡು, ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡ ಬಳಿಕ ಅಸೈಗೋಳಿಯಲ್ಲಿರುವ ತನ್ನ ಮನೆಗೆ ಬಂದಿದ್ದಾರೆ.
ಯುವತಿ ತನ್ನ ಮನೆಯನ್ನು ತೊರೆದು ಉಸ್ತಾದರೊಂದಿಗೆ ಹೋಗಿರುವ ಹಿನ್ನೆಲೆಯಲ್ಲಿ ಆಕೆಯ ಹೆತ್ತವರ ಸಹಿತ ಕುಟುಂಬಸ್ಥರು ಮಂಗಳೂರಿಗೆ ಬಂದು ಉಸ್ತಾದರ ಮನೆ ವ್ಯಾಪ್ತಿಯಲ್ಲಿರುವ ಕೊಣಾಜೆ ಠಾಣೆಗೆ ತೆರಳಿ ಮಗಳನ್ನು ತಮ್ಮೊಂದಿಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಅಶ್ರ್ ಸಅದಿ, ಯುವತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.