ಕಾಮಗಾರಿ ಪೂರ್ಣಗೊಳ್ಳದೆ ಉಳಿದಿರುವ ವನಿತಾ ಶೆಟ್ಟಿ ಅವರ ಹೊಸ ಮನೆ
ಮನೆ ಬಾಡಿಗೆ ಹಣ ಉಳಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಖರೀದಿಸಿದ್ದ ಮಣ್ಣಿನ ಗೋಡೆಯ ಮುರುಕಲು ಮನೆ ಕುಸಿದು ವರ್ಷ ಎರಡಾದರೂ ಜಾರಂದಗುಡ್ಡೆ ವನಿತಾ ಶೆಟ್ಟಿ ಅವರ ಹೊಸ ಮನೆಯ ಕನಸು ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
ಹೊಸ ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಬಂಟರ ಸಂಘ ಮನೆಯನ್ನು ಬಹುತೇಕ ಪೂರ್ಣಗೊಳಿಸಿದೆ. ಆದರೆ ಕಾಮಗಾರಿ ಮುಕ್ತಾಯದ ಹಂತದಲ್ಲಿ ದಾನಿಗಳ ನಿರೀಕ್ಷಿತ ಸ್ಪಂದನೆ ಲಭಿಸದೆ ಹೊಸ ಮನೆಯ ಸುತ್ತಲೂ ಗಿಡಗಂಟಿ ಆವರಿಸುತ್ತಿದೆ. ಮನೆ ನಿರ್ಮಾಣದ ಪೂರ್ಣ ಹೊಣೆ ಈಗ ಸಂತ್ರಸ್ತ ಮಹಿಳೆ ವನಿತಾ ಶೆಟ್ಟಿ ಹೆಗಲಿಗೆ ಬಿದ್ದಿದ್ದು, ಮೂವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜತೆಗೆ ಮನೆ ನಿರ್ವಹಣೆಯ ಜವಾಬ್ದಾರಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೊತ್ತುಗಳು ಕಳ್ಳರ ಪಾಲಾಗುವ ಆತಂಕ: ಕಿಟಕಿ, ಬಾಗಿಲು ಜೋಡಣೆ, ಸಾರಣೆ, ವಿದ್ಯುತ್ ಸಂಪರ್ಕ ಕೆಲಸಗಳು ಮಾತ್ರವೇ ಬಾಕಿ ಉಳಿದಿವೆ. ಈ ಕಾಮಗಾರಿಗಾಗಿ ದಾನಿಗಳು ನೀಡಿದ ಮರಳು, ಸಿಮೆಂಟ್ ದಿನಗಳೆದಂತೆ ನಿಷ್ಟ್ರಯೋಜಕವಾಗುತ್ತಿವೆ. ವನಿತಾ ಶೆಟ್ಟಿ ಮನೆಗೆ ಆಧಾರವಾಗಿದ್ದು, ಕೆಲಸಕ್ಕೆ ಹೋದ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಮರಳು ಸಹಿತ ಕಾಮಗಾರಿಗೆ ತಂದಿರಿಸಿದ ಸೊತ್ತುಗಳು ಕಳ್ಳರ ಪಾಲಾಗುವ ಆತಂಕವೂ ಎದುರಾಗಿದೆ. ಇವರ ಮನೆ ಸಂಪೂರ್ಣಗೊಂಡು ಕನಸು ನನಸಾಗುವ ನಿಟ್ಟಿನಲ್ಲಿ ದಾನಿಗಳ ಸಹಕಾರ ಯಾಚಿಸಿದ್ದಾರೆ.
ಈ ಬಡಕುಟುಂಬಕ್ಕೆ ಧನಸಹಾಯ ನೀಡಲಿಚ್ಛಿಸುವ ದಾನಿಗಳು ವನಿತಾ ಶೆಟ್ಟಿ ಅವರ ಗೂಗಲ್ ಪೇ ನಂಬರ್ 70267 75683 ಅನ್ನು ಸಂಪರ್ಕಿಸಬಹುದಾಗಿದೆ.
ವಿದ್ಯಾಭ್ಯಾಸ ಮೊಟಕುಗೊಳಿಸುವ ನಿರ್ಧಾರ
ವನಿತಾ ಶೆಟ್ಟಿ ಅವರ ಮೂವರು ಹೆಣ್ಣುಮಕ್ಕಳು ಪ್ರತಿಭಾವಂತರಾಗಿದ್ದು, ಹಿರಿಯ ಮಗಳು ದ್ವಿತೀಯ ಪಿಯುಸಿಯಲ್ಲಿದ್ದಾಳೆ. ಉನ್ನತ ವ್ಯಾಸಂಗ ಮಾಡುವ ಕನಸಿದ್ದರೂ ತಾಯಿಯ ಸಂಕಷ್ಟ, ಮನೆಯ ಆರ್ಥಿಕ ಅನನುಕೂಲತೆಯಿಂದಾಗಿ ವಿದ್ಯಾಭ್ಯಾಸ ದ್ವಿತೀಯ ಪಿಯುಸಿಗೆ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ.
ಸದ್ಯ ಪಕ್ಕದಲ್ಲೇ ಇರುವ ಪುಟ್ಟ ಗುಡಿಸಲು ಕುಟುಂಬಕ್ಕೆ ಆಸರೆಯಾಗಿದೆ. ಎಡೆಬಿಡದೆ ಮಳೆ ಸುರಿದಾಗ ನೆಲದಲ್ಲಿ ಒರತೆ ಬರುವುದರಿಂದ ದಿನಗಳೆಯುವುದೇ ಕಷ್ಟ. ಕಳೆದ ಎರಡು ವರ್ಷ ಮಳೆಗಾಲದಲ್ಲಿ ಸೆಣಬಿನ ಗೋಣಿ ಚೀಲಗಳನ್ನು ನೆಲಕ್ಕೆ ಹಾಸಿ, ಅದರ ಮೇಲೆ ಚಾಪೆ ಹಾಕಿ ಮೂವರು ಮಕ್ಕಳೊಂದಿಗೆ ರಾತ್ರಿ ಕಳೆದಿದ್ದೇನೆ. ಸಾಧ್ಯವಾದಷ್ಟು ಬೇಗ ಹೊಸ ಮನೆ ಕಾಮಗಾರಿ ಪೂರ್ಣಗೊಂಡರೆ ತನ್ನ ಹಾಗೂ ಮಕ್ಕಳ ಸಂಕಷ್ಟ ದೂರವಾಗುತ್ತದೆ ಎನ್ನುತ್ತಾರೆ ವನಿತಾ ಶೆಟ್ಟಿ.
ಮೂವರು ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸ ನೀಡಬೇಕೆಂಬ ಹಂಬಲವಿದೆ. ಆದರೆ ಮನೆ ನಿರ್ಮಾಣದ ಹೊಣೆ ನನ್ನನ್ನು ಮತ್ತಷ್ಟು ಜರ್ಜರಿತವಾಗಿಸಿದೆ. ಸಾಕಷ್ಟು ಮಂದಿ ದಾನಿಗಳು ಕೈಲಾದಷ್ಟು ಸಹಕಾರ ನೀಡಿದ್ದಾರೆ. ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಮನೆ ನಿರ್ಮಾಣದ ಜವಾಬ್ದಾರಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಕನಸಿಗೂ ಅಡಚಣೆಯಾಗಿದೆ. ದೈನಂದಿನ ಜೀವನ ನಿರ್ವಹಣೆಯೇ ಹೋರಾಟದಂತಾಗಿದೆ.