ಕೊಳಚೆ ನೀರು ಸಂಗ್ರಹವಾದ ಕೆರೆ. 
ದಕ್ಷಿಣ ಕನ್ನಡ

ಕೊಳಚೆಕೆರೆಯಲ್ಲಿ ತುಂಬಿದೆ ಕೊಳಚೆ

ಪರಿಸವಾಸಿಗಳಲ್ಲಿ ರೋಗ ಭೀತಿ

ಮೂಲ್ಕಿ: ಮೂಲ್ಕಿ ನಗರ ವ್ಯಾಪ್ತಿಯ ಹೋಟೆಲ್‌ಗಳು ಹಾಗೂ ವಸತಿ ಸಂಕೀರ್ಣಗಳ ಕೊಳಚೆ ನೀರು ಹರಿಯುವ ದಾರಿಗೆ ರಾಷ್ಟ್ರೀಯ ಹೆದ್ದಾರಿಯ ರಾಜಕಾಲುವೆ ನಿರ್ಮಾಣದ ಹಿನ್ನೆಲೆಯಲ್ಲಿ ತಡೆ ಹಾಕಲಾಗಿದ್ದು, ಸದ್ಯ ಕೊಳಚೆ ನೀರು ತುಂಬಿ ರಸ್ತೆ ಹಾಗೂ ಹೊರಪ್ರದೇಶಕ್ಕೆ ಹರಿಯುವ ಭೀತಿ ಎದುರಾಗಿದೆ.

ಬಹಳಷ್ಟು ವರ್ಷಗಳಿಂದ ಕೊಳಚೆಕೆರೆ ಎಂದು ಅರಿಯಲ್ಪಡುವ ಮೂಲ್ಕಿ ಬಸ್ಸು ನಿಲ್ದಾಣದ ಬಳಿಯ ಆರ್‌ಆರ್ ಟವರ್ಸ್‌ ಬಳಿಯಲ್ಲಿ ಮೂಲ್ಕಿ ಬಸ್ಸು ನಿಲ್ದಾಣ ಪ್ರದೇಶದ ವಸತಿ ಸಂಕೀರ್ಣಗಳು ಹಾಗೂ ಹೋಟೆಲುಗಳ ಕೊಳಚೆ ತ್ಯಾಜ್ಯನೀರು ತುಂಬಿ ಪರಿಸರದ ಬಾವಿಗಳ ನೀರು ಕಲುಷಿತಗೊಂಡಿರುವುದು ಮಾತ್ರವಲ್ಲದೆ ನುಸಿ ಹಾಗೂ ರೋಗರುಜಿನಗಳಿಗೆ ಕಾರಣವಾಗಿತ್ತು. ಬಳಿಕ ಮೂಲ್ಕಿ ನಗರ ಪಂಚಾಯಿತಿ ಆಡಳಿತ ಹೆದ್ದಾರಿ ಪಕ್ಕದ ರಾಜಕಾಲುವೆಗೆ ನೀರು ಹರಿಯಬಿಟ್ಟಿದ್ದು ಸ್ವಲ್ಪ ಸಮಸ್ಯೆ ಕಡಿಮೆಯಾಗಿತ್ತು.

ಸದ್ಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೊಸ ರಾಜಕಾಲುವೆ ನಿರ್ಮಾಣ ಸಂದರ್ಭ ನೀರು ತಡೆಹಿಡಿಯಲಾಗಿದ್ದು ಬಹಳ ವಾಸನೆ ಹಾಗೂ ರೋಗರುಜಿನಗಳ ಭೀತಿ ಎದುರಾಗಿದೆ. ಮಳೆ ಬಂದರೆ ಅಥವಾ ನೀರು ತುಂಬಿ ಹೊರಹರಿದರೆ ಆರ್‌ಆರ್ ಟವರ್ ಎದುರುಗಡೆ ಜನವಸತಿ ಪ್ರದೇಶಕ್ಕೂ ಹಾನಿಯಾಗಲಿದೆ.

ಒಳಚರಂಡಿಗೆ ಒತ್ತಾಯ

ಮೂಲ್ಕಿ ಪರಿಸರದಲ್ಲಿ ಬಹಳಷ್ಟು ವಸತಿ ಸಂಕೀರ್ಣಗಳು ಹೋಟೆಲ್ ಕಟ್ಟಡಗಳು ಇದ್ದರೂ ಸುತ್ತಲೂ ಒಳಚಂರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ತೋಡಿನಲ್ಲಿ ಹರಿಯುತ್ತಿರುವುದು ಸಮಸ್ಯೆಯ ಮೂಲವಾಗಿದೆ. ಪಂಚಾಯಿತಿ ಕೊಳಚೆ ನೀರು ಶುದ್ಧೀಕರಣ ವ್ಯವಸ್ಥೆ ಸ್ಥಾಪಿಸಲು ತಿಳಿಸಿದ್ದರೂ ಎಲ್ಲರ ಕೊಳಚೆ ತೋಡಿಗೆ ಹರಿಯುತ್ತಿರುವುದು ವಿಪರ್ಯಾಸ.

ಕೊಳಚೆ ನೀರು ತುಂಬಿ ಹರಿದರೆ ನಮ್ಮ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಬೇಕಾದ ಭೀತಿ ಇದೆ. ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವುದು ಬಹಳ ಅಗತ್ಯ.
ಜೋನ್ ಕ್ವಾಡ್ರಸ್, ವ್ಯಾಪಾರಿ