ಕಾಮಗಾರಿ ಪ್ರಯುಕ್ತ ಮುಚ್ಚಲಾಗಿರುವ ತೊಕ್ಕೊಟ್ಟು ಭಟ್ನಗರ ರಸ್ತೆ.
- ಕಾಮಗಾರಿ ಆಮೆನಡಿಗೆ
- ಸ್ಥಳೀಯರಿಗೆ ಸಂಕಷ್ಟ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಉಳ್ಳಾಲ ನರಗಸಭಾ ವ್ಯಾಪ್ತಿಯಲ್ಲಿರುವ ಸದಾ ಕಿರಿಕ್ ನೀಡುತ್ತಾ ಬಂದಿದ್ದ ತೊಕ್ಕೊಟ್ಟು ಭಟ್ನಗರದಿಂದ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತೆ ಸಮಸ್ಯೆ ಸೃಷ್ಟಿಸಿದೆ. ಕಾಮಗಾರಿ ಆರಂಭಗೊಂಡರೂ ಆಮೆನಡಿಗೆಯಲ್ಲಿ ಸಾಗುತ್ತಿದ್ದು ಸ್ಥಳೀಯರಿಗೆ ಸಂಕಷ್ಟ ತಂದೊಡ್ಡಿದೆ.
ತೊಕ್ಕೊಟ್ಟು ಭಟ್ನಗರ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಿಂದ ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗುವ ರಾಜ್ಯ ಹೆದ್ದಾರಿಗೆ ಈ ರಸ್ತೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ನಡುವೆ ಸಿಗುವ ಚೆಂಬುಗುಡ್ಡೆಯಲ್ಲಿರುವ ಅತ್ಯಂತ ಹಳೆಯ ರುದ್ರಭೂಮಿಗೆ ದೂರದೂರುಗಳಿಂದ ಸಂಸ್ಕಾರಕ್ಕಾಗಿ ಮೃತದೇಹಗಳನ್ನು ತರಲಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ವಿದ್ಯುತ್ ಚಿತಾಗಾರವೂ ನಿರ್ಮಾಣಗೊಂಡಿದೆ.
ಇಲ್ಲಿಗೆ ಬರುವ ರಸ್ತೆ ತೀರಾ ಇಳಿಜಾರಿನಿಂದ ಕೂಡಿದ್ದು, ಆಗಾಗ ಹೊಂಡಗಳಿಂದ ಆವೃತ್ತವಾಗುತ್ತದೆ. ಮಳೆಗಾಲದಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲೇ ಹರಿಯುವುದರಿಂದ ಕಾಂಕ್ರೀಟ್ ಕಾಮಗಾರಿ ಬೇಡಿಕೆ ಸ್ಥಳೀಯರದ್ದಾಗಿತ್ತು.
ಆದರೆ ಮತ್ತೆ ಡಾಂಬರು ಕಾಮಗಾರಿ ನಿಟ್ಟಿನಲ್ಲಿ ಮಾರ್ಚ್ 11ರಂದು ಶಿಲಾನ್ಯಾಸ ನಡೆಸಲಾಗಿದ್ದು, ವಾರದ ಹಿಂದೆ ಕೆಲಸ ಆರಂಭಿಸಿ ಚೆಂಬುಗುಡ್ಡೆಯಿಂದ ಭಟ್ನಗರವರೆಗೆ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ. ರಸ್ತೆ ಜಲ್ಲಿಕಲ್ಲು ಹಾಕಲಾಗಿದ್ದರೂ ಸಮರ್ಪಕ ರೀತಿಯಲ್ಲಿ ಕೆಲಸ ನಡೆಯದ ಕಾರಣ ಸಂಕಷ್ಟಕ್ಕೀಡಾಗಿರುವ ಸ್ಥಳೀಯರು ರಸ್ತೆ ತೆರೆದು ವಾಹನ ಚಲಾಯಿಸುತ್ತಿದ್ದಾರೆ. ಆದರೆ ಆಟೋ ರಿಕ್ಷಾ, ದ್ವಿಚಕ್ರ ವಾಹನ ಸಂಚಾರ ಅಸಾಧ್ಯವಾಗಿದೆ. ಒಂದೆರಡು ದಿನಗಳಲ್ಲಿ ಮುಗಿಸಬೇಕಿದ್ದ ಕಾಮಗಾರಿ ಹೊರಜಿಲ್ಲೆಯ ಗುತ್ತಿಗೆದಾರರಿಂದ ವಿಳಂಬವಾಗಿದೆ. ವಾರ ಕಳೆದರೂ ಜಲ್ಲಿ ಮಾತ್ರ ಹಾಕಲಾಗಿದ್ದು, ಜನರ ತಾಳ್ಮೆ ಪರೀಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರಾದ ಸುರೇಶ್ ಭಟ್ನಗರ ಆಗ್ರಹಿಸಿದ್ದಾರೆ.
ಭಾರಿ ವಾಹನಗಳ ಸಂಚಾರ
ತೊಕ್ಕೊಟ್ಟಿನಲ್ಲಿ ರಸ್ತೆ ಬ್ಲಾಕ್ ಆದರೆ ದೇರಳಕಟ್ಟೆ ಭಾಗಕ್ಕೆ ಹೋಗುವವರು ಈ ರಸ್ತೆ ಬಳಸುತ್ತಾರೆ. ಉಳ್ಳಾಲ ನಗರಸಭಾ ವ್ಯಾಪ್ತಿಗೆ ಬೃಹತ್ ನೀರಿನ ಟ್ಯಾಂಕ್ ಕೂಡ ಈ ರಸ್ತೆಯಲ್ಲೇ ಇರುವುದರಿಂದ ಭಾರಿ ವಾಹನಗಳ ಸಂಚಾರವೂ ಇದೆ. ಚೆಂಬುಗುಡ್ಡೆ ಭಾಗದಲ್ಲಿ ರಸ್ತೆ ಬ್ಲಾಕ್ ಆದರೆ ತಲಪಾಡಿ, ಉಳ್ಳಾಲ, ಕೇರಳ ಭಾಗಕ್ಕೆ ಸಾಗುವವರಿಗೂ ಈ ರಸ್ತೆ ಪರ್ಯಾಯ ಎನಿಸಿದೆ.