ಬಳ್ಕುಂಜೆ, ಕೊಲ್ಲೂರು, ಉಳೇಪಾಡಿ ಗ್ರಾಮಗಳಲ್ಲಿ ಕೈಗಾರಿಕೆಗಳಿಗೆ 1091.57 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಕೆಐಎಡಿಬಿ ಪ್ರಕ್ರಿಯೆ ನಡೆಸಿದ್ದು, ಇದರಲ್ಲಿ 250-300 ಎಕರೆ ಮಾತ್ರ ಕೈಗಾರಿಕೆಗಳ ಬಳಕೆಗೆ ಯೋಗ್ಯ ಎಂದು ಸರ್ವೇ ತಂಡ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಬಡಾವಣೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿದ್ದು, ಈ ಪ್ರದೇಶದ ನಾಗರಿಕರ ಹಲವು ವರ್ಷಗಳ ಹೋರಾಟಕ್ಕೆ ಒಂದು ಹಂತದ ಗೆಲುವು ದೊರಕಿದೆ ಎಂದು ಐವನ್ ಡಿಸೋಜ ಹೇಳಿದರು. 
ದಕ್ಷಿಣ ಕನ್ನಡ

ಕೈಗಾರಿಕಾ ಬಡಾವಣೆ ಯೋಜನೆ ಕೈಬಿಟ್ಟ ಸರ್ಕಾರ

ಮಂಗಳೂರು: ಬಳ್ಕುಂಜೆ, ಕೊಲ್ಲೂರು, ಉಳೇಪಾಡಿ ಗ್ರಾಮಗಳಲ್ಲಿ ಕೈಗಾರಿಕೆಗಳಿಗೆ 1091.57 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಕೆಐಎಡಿಬಿ ಪ್ರಕ್ರಿಯೆ ನಡೆಸಿದ್ದು, ಇದರಲ್ಲಿ 250-300 ಎಕರೆ ಮಾತ್ರ ಕೈಗಾರಿಕೆಗಳ ಬಳಕೆಗೆ ಯೋಗ್ಯ ಎಂದು ಸರ್ವೇ ತಂಡ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಬಡಾವಣೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿದ್ದು, ಈ ಪ್ರದೇಶದ ನಾಗರಿಕರ ಹಲವು ವರ್ಷಗಳ ಹೋರಾಟಕ್ಕೆ ಒಂದು ಹಂತದ ಗೆಲುವು ದೊರಕಿದೆ ಎಂದು ಐವನ್ ಡಿಸೋಜ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ವಿಧಾನಪರಿಷತ್ ಅಧಿವೇಶನದಲ್ಲಿ ಭೂಮಾಫಿಯಾದ ಪ್ರಭಾವದಿಂದ ಅವೈಜ್ಞಾನಿಕವಾಗಿ ಉಪಯೋಗವಲ್ಲದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಆಗ್ರಹಿಸಲಾಗಿದೆ. ಇದಕ್ಕೆ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ಈ ಬಗ್ಗೆ ಉತ್ತರಿಸಿದ್ದು, 1091 ಎಕರೆಯಲ್ಲಿ ಸುಮಾರು 300 ಎಕರೆ ಮಾತ್ರವೇ ಕೈಗಾರಿಕಾ ಬಡವಾಣೆಗೆ ಯೋಗ್ಯವಾಗಿದ್ದು, ಉಳಿದ ಜಮೀನ್ನು ಕೈಬಿಡುವ ಬಗ್ಗೆ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದ್ದಾರೆ.
ಪ್ರಸ್ತಾವಿತ ಜಮೀನುಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯರು ಸ್ಥಳ ತನಿಖೆ ಜರುಗಿಸಿದ್ದಾರೆ. ಪ್ರಸ್ತಾವಿತ ಜಮೀನಿನ ಮೇಲ್ಮೈ ಗುಡ್ಡ, ತಗ್ಗು ಪ್ರದೇಶವನ್ನು ಟೊಪೋಗ್ರಾಫಿಕಲ್ ಸರ್ವೇ ಮಾಡಲಾಗಿದೆ. ಪ್ರಾಥಮಿಕ ಸರ್ವೇ ಪ್ರಕಾರ 1091 ಎಕರೆ ಸ್ವಾಧೀನ ಪ್ರದೇಶದ ಪೈಕಿ 250-300 ಎಕರೆ ಪ್ರದೇಶವನ್ನು ಹೊರತು ಉಳಿಕೆ ಜಮೀನು ಗುಡ್ಡ ಹಾಗೂ ಇಳಿಜಾರಿನಿಂದ ಕೂಡಿರುವುದು ಕಂಡು ಬಂದಿದೆ.

ಏನಿದು ಪ್ರಕರಣ

"

ಕೈಗಾರಿಕಾ ಬಡವಾಣೆ ರಚಿಸಲು ಭೂಸ್ವಾಧೀನಕ್ಕೆ ಅಧಿಸೂಚನೆಗೊಂಡ ಭೂಮಿ ಸೂಕ್ತವಲ್ಲ ಎಂಬ ವರದಿಯನ್ನು ಸರ್ವೇ ಸಮಿತಿಯು ನೀಡಿದೆ. ಅದರಲ್ಲಿ ಸರ್ಕಾರಿ ಭೂಮಿ ಅತ್ಯಲ್ಪವಾಗಿದ್ದು, ಭೂಮಾಫಿಯಾದ ಪ್ರಭಾವದಿಂದಾಗಿ ಕೈಗಾರಿಕೆಗೆ ಸೂಕ್ತವಲ್ಲದ್ದ ಖಾಸಗಿ ಭೂಮಿ ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಕೋಟಿ ರೂ. ನಷ್ಟವಾಗುವ ಪ್ರಮೇಯ ತಪ್ಪಿದೆ. ಕೆಲವೊಮ್ಮೆ ಸರ್ಕಾರವು ಯಾವ ರೀತಿಯಲ್ಲಿ ತೊಂದರೆಗೆ ಸಿಲುಕಿಕೊಳ್ಳಬಹುದು ಎಂಬುದಕ್ಕೆ ಇದು ಸೂಕ್ತ ನಿದರ್ಶನವಾಗಿದೆ. ಇದೀಗ ಈ ಭೂಮಿ ಡಿನೋಟಿಫೈ ಆಗುವ ಹಂತದಲ್ಲಿದ್ದು, ಇದು ಸ್ಥಳೀಯರು ಹಲವು ವರ್ಷಗಳ ಕಾಲ ನಡೆಸಿದ ಹೊರಾಟಕ್ಕೆ ಸಂದ ಜಯ.