ಮಂಗಳೂರು: ಯಾವುದೇ ಸಂಸ್ಥೆ ಅಥವಾ ಕಾರ್ಯಕ್ರಮದ ಬೆಳವಣಿಗೆಯ ಆರಂಭದಲ್ಲಿ ಸವಾಲುಗಳು ಎದುರಾಗುವುದು ಸಹಜ. ಆದರೆ ನಿರಂತರ ಪ್ರಯತ್ನ, ತಾಳ್ಮೆ ಮತ್ತು ದೃಢಸಂಕಲ್ಪದಿಂದ ಯಶಸ್ವಿನ ಗುರಿಯನ್ನು ತಲುಪಬಹುದು ಎಂದು ದ.ಕ. ಜಿಲ್ಲಾ ಪ.ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಾಗೂ ಎನ್ಎಸ್ಎಸ್ಎಂ ಪ.ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಹೇಳಿದರು.
ಅವರು ಉರ್ವ ಎಸ್ಸಿಎಸ್ ಪ್ರಥಮ ದರ್ಜೆ ಕಾಲೇಜಿನ ರಿವರ್ಸೈಡ್ ಕ್ಯಾಂಪಸ್ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಪದವಿಪೂರ್ವ ಮಟ್ಟದ ಉತ್ಸವ ಎಸ್ಸಿಎಸ್ ಆಹ್ವಾನ್ 2ಕೆ26 ಇದರ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.
ಗೆದ್ದರೂ, ಸೋತರೂ ಉತ್ಸಾಹ ಕಡಿಮೆಯಾಗಬಾರದು. ಯಶಸ್ವಿನ ಮೊದಲ ಹೆಜ್ಜೆಯೇ ಪ್ರಯತ್ನ. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ತಾಳ್ಮೆ, ಆತ್ಮವಿಶ್ವಾಸ ಮತ್ತು ಜೀವನದ ಮೌಲ್ಯಗಳನ್ನು ಕಲಿಯಲು ಸಾಧ್ಯ. ಇಂತಹ ಉತ್ಸವಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಅವರಲ್ಲಿ ನಾಯಕತ್ವ, ತಂಡದ ಮನೋಭಾವ ಮತ್ತು ಜೀವನವನ್ನು ಎದುರಿಸುವ ಧೈರ್ಯವನ್ನು ಬೆಳೆಸುತ್ತವೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ. ರಜನೀಶ್ ಸೊರಕೆ, ಉತ್ಸವದ ಸಲಹೆಗಾರ ಎಂಡೋ ಪಾಲ್, ಕಾಲೇಜಿನ ಪ್ರಾಂಶುಪಾಲ ಹಾರ್ದಿಕ್ ಪಿ. ಚೌಹಾಣ್, ಸಹೋದರ ಸಂಸ್ಥೆಯ ಎಸ್ಸಿಎಸ್ ರಿವರ್ಸೈಡ್ ಇಂಟರ್ನ್ಯಾಷನಲ್ ಅಕಾಡೆಮಿಯ ಪ್ರಾಂಶುಪಾಲ ಹೆಲೆನ್ ಲೋಬೊ, ಎಸ್ಸಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಾರಾಮ್ ರಾವ್ ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಂಯೋಜಕಿ ಸುಚಿತ್ರಾ ಪಿ. ಶೆಟ್ಟಿ ಅವರು ವರದಿ ವಾಚಿಸಿದರು. ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು. ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ಸಾನ್ವಿ ಸ್ವಾಗತಿಸಿದರು. ದ್ವಿತೀಯ ಬಿ.ಕಾಮ್. ವಿದ್ಯಾರ್ಥಿನಿ ಬಿಂದು ಕುಲಾಲ್ ವಂದಿಸಿದರು.
ಉತ್ಸವದಲ್ಲಿ 18 ಕಾಲೇಜುಗಳಿಂದ 365 ವಿದ್ಯಾರ್ಥಿಗಳು ಭಾಗವಹಿಸಿ ಕ್ರೀಡೆ, ಕಲೆ ಮತ್ತು ಡಿಜಿಟಲ್ ಸೃಜನಶೀಲತೆಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.
ಪ್ರತಿಯೊಂದು ಹಂತದಲ್ಲಿಯೂ ಸಂಸ್ಥೆಯ ಅಧ್ಯಕ್ಷರು ನೀಡಿದ ಪ್ರೋತ್ಸಾಹ ಮತ್ತು ಸಹಕಾರವು ಕಾರ್ಯಕ್ರಮದ ಯಶಸ್ವಿಗೆ ಪ್ರಮುಖ ಕಾರಣವಾಯಿತು. ನೀವು ಪ್ರಯತ್ನಿಸಿ, ನಿಮ್ಮೊಂದಿಗೆ ನಾನಿದ್ದೇನೆ ಎಂಬ ಅಧ್ಯಕ್ಷರ ಭರವಸೆಯು ಆಯೋಜಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ನೀಡಿತು.ಎಂಡೋ ಪಾಲ್, ಉತ್ಸವದ ಸಲಹೆಗಾರ