ಸುಳ್ಯ: ನಗರದ ಹಳೆಗೇಟು ಕೊಡಿಯಾಲಬೈಲು ರಸ್ತೆ ಸಂಪೂರ್ಣ ನಾದುರಸ್ತಿಯಲ್ಲಿದ್ದು ಸಂಚಾರಕ್ಕೆ ದುಸ್ತರವಾಗಿರುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಸಚಿವಾಲಯ ನಿರ್ದೇಶನ ನೀಡಿದೆ. ಅದರಂತೆ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ.
25 ವರ್ಷಗಳಿಂದ ಅಭಿವೃದ್ಧಿ, ಡಾಂಬರು ಕಾಣದ ರಸ್ತೆ ಸಂಪೂರ್ಣ ಹದಗೆಟ್ಟು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿ ಸುಳ್ಯದ ಬಹುಉಪಯೋಗಿ ಹಳೆಗೇಟು-ಕೊಡಿಯಾಲಬೈಲು ರಸ್ತೆಯ ಅವ್ಯವಸ್ಥೆಯ ಬಗ್ಗೆ ಸೆ.4ರಂದು ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು. ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯದ ನಿರ್ದೇಶನದಿಂದ ಎಚ್ಚೆತ್ತುಕೊಂಡ ಸುಳ್ಯ ಪಟ್ಟಣ ಪಂಚಾಯಿತಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿದೆ.
ರಸ್ತೆಯ ಸ್ಥಿತಿ ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ಕೈಗೊಂಡು ಪಾಲನಾ ವರದಿ ನೀಡುವಂತೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆ ರಸ್ತೆಯ ಹೊಂಡವನ್ನು ಜಲ್ಲಿಕಲ್ಲು ಹಾಕಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ರಸ್ತೆಯನ್ನು ನಗರೋತ್ಥಾನ ಹಂತ-5ರ ಯೋಜನೆಯಡಿ ಅಭಿವೃದ್ಧಿಗೆ ಪರಿಗಣಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸುಳ್ಯ ಪಪಂ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಹಳೆಗೇಟು ಹೊಸಗದ್ದೆ ಕಟ್ಟೆ ಬಳಿಯಿಂದ ಕೊಡಿಯಾಲಬೈಲು-ದುಗ್ಗಲಡ್ಕ ರಸ್ತೆಗೆ ಸಂದಿಸುವ ರಸ್ತೆ 2.5 ಕಿ.ಮೀ ದೂರ ಇದೆ. ಅಗಲ ಕಿರಿದಾದ ರಸ್ತೆಯಲ್ಲಿ ವಿವಿಧ ಕಡೆಗಳಲ್ಲಿ ಭಾರಿ ಗಾತ್ರದ ಹೊಂಡಗಳೇ ತುಂಬಿದ್ದು, ಅಭಿವೃದ್ಧಿ ಮಾಡಿ ಸರ್ವಋತು ರಸ್ತೆಯಾಗಿಸಬೇಕೆಂಬುದು ಈ ಭಾಗದ ಜನರ ಒಕ್ಕೊರಲ ಬೇಡಿಕೆ.