ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಟೀಮ್ ಹನುಮಾನ್ ಸಂಘಟನೆಯ ಯುವಕರು ಹಣವನ್ನು ಸಮಾಜಕ್ಕೆ ವಿನಿಯೋಗಿಸಿ ಮಾದರಿಯಾಗಿದ್ದಾರೆ. ಈ ಸಂಘಟನೆ ಊರಿಗೆ ದೊಡ್ಡ ಸಂಪತ್ತಾಗಿದೆ ಎಂದು ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್ ಶ್ಲಾಘಿಸಿದರು.
ಟೀಮ್ ಹನುಮಾನ್ ವತಿಯಿಂದ ನವರಾತ್ರಿ ಸಂದರ್ಭ ಯಕ್ಷವೇಷ ಧರಿಸಿ ಸಂಗ್ರಹಿಸಿದ 2,01,674 ರೂ. ಚೆಕ್ ವಾಕ್ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ಕಲ್ಲಗುಡ್ಡೆ ಪಲ್ಲಮಜಲುವಿನ ನಾಲ್ಕು ವರ್ಷದ ನವ್ಯ ಅವರ ಶಸ್ತ್ರಚಿಕಿತ್ಸೆಗಾಗಿ ಪಾಲಕರಾದ ಯಶೋದಾ ಮತ್ತು ಆನಂದ ಪೂಜಾರಿ ದಂಪತಿಗೆ ಹಸ್ತಾಂತರಿಸಿ ಮಾತನಾಡಿದರು.
ಉಳ್ಳಾಲ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ್ ಬಂಗೇರ ಅರಸುಹಿತ್ಲು ಮಾತನಾಡಿದರು. ಕೆಲಸ ಮಾಡುತ್ತಿದ್ದ ಸಂದರ್ಭ ಬಿದ್ದು ಸಂಕಷ್ಟದಲ್ಲಿರುವ ಅರವಿಂದ್ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು. ’ಟೀಮ್ ವಜ್ರ’ ಹೆಸರಲ್ಲಿ ವೇಷ ಧರಿಸಿ ಸಂಗ್ರಹಿಸಿದ ಹತ್ತು ಸಾವಿರ ರೂ. ಬಾಲಕಿಯ ಚಿಕಿತ್ಸೆಗೆ ಹಸ್ತಾಂತರಿಸಿ ಆರು ಬಾಲಕರು ಮಾನವೀಯತೆ ಮೆರೆದರು.
ಧರ್ಮನಗರ ಶ್ರೀ ರಾಹುಗುಳಿಗ ಬನದ ಪ್ರಧಾನ ಅರ್ಚಕ ಭಾಸ್ಕರ ತೆಂಗಿನಹಿತ್ಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ, ಒಂಬತ್ತುಕೆರೆ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಅಧ್ಯಕ್ಷ ಶರತ್ಚಂದ್ರ ಗಟ್ಟಿ ಸೋಮೇಶ್ವರ, ಮಹಿಳಾ ಕಾಂಗ್ರೆಸ್ ಉಳ್ಳಾಲ ನಗರಾಧ್ಯಕ್ಷೆ ಅಮಿತಾ ಅಶ್ವಿನ್, ಸಾಮಾಜಿಕ ಕಾರ್ಯಕರ್ತ ರಿಚರ್ಡ್ ವೇಗಸ್, ಅಂಗನವಾಡಿ ಸಹಕಾರ ಸಂಘದ ಅಧ್ಯಕ್ಷೆ ಶಕೀಲ, ಧರ್ಮನಗರ ನಾಗಬನ ಸೇವಾ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಧರ್ಮನಗರ, ಸುಂದರಿಭಾಗ್ ವೀರಾಂಜನೇಯ ವ್ಯಾಯಾಮ ಶಾಲೆ ಅಧ್ಯಕ್ಷ ನವನೀತ್ ಉಳ್ಳಾಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಲಯ ಮೇಲ್ವಿಚಾರಕ ಆದರ್ಶ್, ಟೀಮ್ ಹನುಮಾನ್ ಅಧ್ಯಕ್ಷ ಸಂಪತ್ ಕುಮಾರ್ ಉಪಸ್ಥಿತರಿದ್ದರು. ಕಾವ್ಯ ಸುವರ್ಣ ನಿರೂಪಿಸಿದರು.