ಜಿಲ್ಲಾಡಳಿತದ ಪರವಾಗಿ ಉಪ ತಹಶೀಲ್ದಾರ್ ನವೀನ್ ಕುಮಾರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಆನಂದ ಕೆ., ರಮೇಶ್ ಕೋಟ್ಯಾನ್, ಪ್ರಮೋದ್ ಕುಮಾರ್ ಉಳ್ಳಾಲ್ ಮೊದಲಾದವರಿದ್ದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಟ್ಯಾಕ್ಸಿ ಚಾಲಕರಿಗೆ ಅವೈಜ್ಞಾನಿಕ ಪಾರ್ಕಿಂಗ್ ಶುಲ್ಕ ಏರಿಕೆಯಿಂದ ಸಮಸ್ಯೆಯಾಗುತ್ತಿದೆ. ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ಆನಂದ್ ಕೆ. ಎಚ್ಚರಿಕೆ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಳ ಹಾಗೂ ಟ್ಯಾಕ್ಸಿ ಚಾಲಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಕಾವೂರು ಜಂಕ್ಷನ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಎಲ್ಲಾ ತೆರಿಗೆಗಳನ್ನು ಪಾವತಿಸಿ, ಮೋಟಾರು ವಾಹನ ಕಾಯ್ದೆಯ ಎಲ್ಲಾ ನಿಯಮಗಳನ್ನು ಪಾಲಿಸುತ್ತಿರುವ ಪ್ರವಾಸಿ ವಾಹನಗಳಿಗೆ ಅನ್ಯಾಯ ಮಾಡುತ್ತಿರುವುದು ಖಂಡನೀಯ. ಖಾಸಗಿ ವಾಹನಗಳಿಗೆ ವಿಶೇಷ ಸವಲತ್ತು ನೀಡಿ, ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕ ಪಾರ್ಕಿಂಗ್ ದರ ವಿಧಿಸಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.
ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಮಾತನಾಡಿ, ದೇಶದ ಇತರ ಯಾವುದೇ ವಿಮಾನ ನಿಲ್ದಾಣಗಳಲ್ಲಿ ಇಂತಹ ತಾರತಮ್ಯ ಇಲ್ಲ. ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿರುವ ಪ್ರವಾಸಿ ವಾಹನ ಕ್ಷೇತ್ರವನ್ನು ಕಡೆಗಣಿಸುವುದು ಸರಿಯಲ್ಲ. ಅನೇಕ ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಿರುವ ಈ ಕ್ಷೇತ್ರವನ್ನು ರಕ್ಷಿಸುವುದು ಅಗತ್ಯ ಎಂದು ಒತ್ತಾಯಿಸಿದರು.
ಸಂಘದ ಹಿರಿಯ ಸದಸ್ಯ ಪ್ರಮೋದ್ ಕುಮಾರ್ ಉಳ್ಳಾಲ್ ಮಾತನಾಡಿ, ನಾವು ಬೆವರು ಸುರಿಸಿ ಕಟ್ಟಿದ ಪ್ರವಾಸಿ ವಾಹನಗಳ ಸೇವೆಯ ಮೇಲೆ ಖಾಸಗಿ ಒಡೆತನದ ಅದಾನಿ ಸಂಸ್ಥೆಯು ಶ್ರಮಿಕರ ರಕ್ತ ಹೀರುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಡಳಿತದ ಪರವಾಗಿ ಆಗಮಿಸಿದ ಉಪ ತಹಶೀಲ್ದಾರ್ ನವೀನ್ ಕುಮಾರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಸಮಸ್ಯೆ ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳೀಯ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಯನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಘದ ಉಪಾಧ್ಯಕ್ಷರುಗಳಾದ ಹರಿಶ್ಚಂದ್ರ, ಹರೀಶ್ ಶೆಟ್ಟಿ ಕುತ್ತಾರು. ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ಸುರೇಶ್ ಸಾಲಿಯನ್, ರೋಷನ್ ಕಿನ್ನಿಗೋಳಿ, ನಾಗೇಶ್ ಮಿತ್ತಡ್ಕ ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು,ಸದಸ್ಯರು ಭಾಗವಹಿಸಿದ್ದರು. ಸಂತೋಷ್ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು.