ಮೂಡುಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು.
ಮೂಡುಬಿದಿರೆ: ವಸತಿ ನಿಲಯದ ಶಿಸ್ತು ಜೀವನದಲ್ಲಿ ದೀರ್ಘಕಾಲದವರೆಗೆ ಸಕಾರಾತ್ಮಕ ಪರಿಣಾಮವನ್ನುಂಟುಮಾಡುತ್ತದೆ. ಮನೆಯ ಅನುಕೂಲಕರ ವಾತಾವರಣದಿಂದ ಬಂದಾಗ ಮುಂಜಾನೆ ಬೇಗ ಏಳುವ ಸವಾಲುಗಳನ್ನು ನಾನೂ ಎದುರಿಸಿದ್ದೆ. ಆದರೆ ಈ ಶಿಸ್ತು ಜೀವನಕ್ಕೆ ಅತಿ ಮುಖ್ಯ. ಕೇವಲ ಬುದ್ಧಿವಂತಿಕೆಯಷ್ಟೇ ಅಲ್ಲದೆ, ನೈತಿಕ ಮೌಲ್ಯ ಬೆಳೆಸಿಕೊಳ್ಳುವುದು ಮುಖ್ಯ ಎಂದು ಮಂಗಳೂರು ವಲಯದ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ವೈಶಾಕ್ ಪಿ.ಆರ್. ಹೇಳಿದರು.
ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಕ್ಸಲೆಂಟ್‌ನ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಈ ನಿಟ್ಟಿನಲ್ಲಿ ಉತ್ತಮ ಮಾರ್ಗದರ್ಶನ ನೀಡುತ್ತಿರುವುದು ಸಂತಸದ ವಿಚಾರ ಎಂದರು.
ದ.ಕ. ಪದವಿಪೂರ್ವ ಶಿಕ್ಷಣ ಇಲಾಖೆಯ ವಿಭಾಗಾಧಿಕಾರಿ ನಿತಿನ್ ಬಿ.ಟಿ. ಮಾತನಾಡಿ, ನಿಸ್ವಾರ್ಥ ಮನೋಭಾವನೆಯಿಂದ ಬದುಕಿ, ನಿಮ್ಮ ಯಶಸ್ಸಿನ ಜತೆಗೆ ಇನ್ನೊಬ್ಬರ ಯಶಸ್ಸಿಗೂ ಸಂತೋಷಪಡಿ. ಉಳಿದವರನ್ನೂ ಪ್ರೋತ್ಸಾಹಿಸಿ, ಅದು ನಿಮ್ಮ ಯಶಸ್ಸಿಗೂ ದಾರಿದೀಪವಾಗಬಹುದು ಎಂದರು.
ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಹೊಂದಿರುತ್ತಾರೆ. ಶಿಕ್ಷಣ ಎಂದರೆ ಕೇವಲ ಪಠ್ಯಕ್ಕೆ ಸೀಮಿತವಲ್ಲ. ಬದುಕಿನ ಸವಾಲುಗಳಿಗೂ ನಿಮ್ಮನ್ನು ಸಿದ್ಧಗೊಳಿಸಬೇಕು. ನಿಮಗೆ ನೀವೇ ಸವಾಲನ್ನು ಒಡ್ಡಿಕೊಂಡು ಧೈರ್ಯದಿಂದ ಜೀವನ ಎದುರಿಸಿ ಎಂದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ಮಂಡಳಿಯ ನಿರ್ದೇಶಕ ಡಾ.ಬಿ.ಪಿ.ಸಂಪತ್ ಕುಮಾರ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ತೇಜಸ್ವೀ ಭಟ್ ಬಹುಮಾನ ವಿಜೇತರ ಪಟ್ಟಿ ಓದಿದರು. ಉಪನ್ಯಾಸಕರಾದ ಪ್ರಿಯಾಂಕಾ ಮತ್ತು ಅಶೋಕ್ ಅತಿಥಿಗಳನ್ನು ಪರಿಚಯಿಸಿದರು. ಉಪಪ್ರಾಂಶುಪಾಲ ಮನೋಜ್ ಕುಮಾರ್ ವಂದಿಸಿದರು. ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು.
ವಿದ್ಯಾರ್ಥಿಗಳು ಬರೆದ ಕಾದಂಬರಿ ಬಿಡುಗಡೆ
ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳಾದ ಮಧುಮಿತಾ ಬರೆದ ‘ಯಾತ್ರೆ’(ಕನ್ನಡ ಕಾದಂಬರಿ), ಲಾಕ್ಷೃ ಬರೆದ ‘ದಿ ಗ್ಲಿಚ್’, ಕಲ್ಯಾಣ್ ಬರೆದ ‘ಕೌಂಟ್ ಡೌನ್’, ಅದಿತಿ ಅರವಲ್ಲಿ ಬರೆದ ‘ಥ್ರೂ ದಿ ಮೆಮೊರಿಸ್ ಆಫ್ ಲೆನ್ಸ್’ ಕಾದಂಬರಿಗಳನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.