ಕಡಬ: ಅರಣ್ಯ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಕಾಡುಪ್ರಾಣಿಗಳ ಬೇಟೆ ಪ್ರಕರಣಗಳು ನಡೆಯುತ್ತಿದ್ದು, ಐತ್ತೂರಿನ ಮಾಯಿಪಾಜೆ ಎಂಬಲ್ಲಿನ ರಬ್ಬರ್ ತೋಟದಲ್ಲಿ ಮುಂಜಾನೆ 3 ಗಂಟೆ ಹೊತ್ತಿಗೆ ಮೂರು ಬಾರಿ ಗುಂಡಿನ ಸದ್ದು ಕೇಳಿ ಬಂದಿದೆ. ಸ್ಥಳೀಯರು ಪರಿಶೀಲಿಸಿದಾಗ ರಬ್ಬರ್ ತೋಟದಲ್ಲಿ ಕಾಡುಪ್ರಾಣಿಯೊಂದು ಗುಂಡೇಟಿಗೆ ಬಲಿಯಾಗಿರುವ ಕುರುಹುಗಳು ಪತ್ತೆಯಾಗಿದೆ. ರಕ್ತದ ಕಲೆ ಹಾಗೂ ಬಂದೂಕಿನ ಮದ್ದಿನ ಕವರ್ಗಳು ಕಂಡುಬಂದಿವೆ.
ಸುಬ್ರಹ್ಮಣ್ಯ ಮತ್ತು ಪಂಜ ವಲಯದ ಅರಣ್ಯ ಗಡಿ ಭಾಗದಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿ ಜಿಂಕೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಜತೆಗೆ ಕಾಡುಹಂದಿಗಳಿದ್ದು ನಿರಂತರವಾಗಿ ಬೇಟೆಯಾಡಲಾಗುತ್ತಿದೆ. ಈ ಭಾಗದಲ್ಲಿ ರಾತ್ರಿ ವೇಳೆ ಅರಣ್ಯ ಇಲಾಖೆ ಗಸ್ತು ಹೆಚ್ಚಿಸಬೇಕು. ಅಕ್ರಮ ಬೇಟೆಗಾರರನ್ನು ಪತ್ತೆ ಹಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆದರೆ ಈ ಕುರಿತು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಬೇಟೆಯಾಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.