ಮಂಗಳೂರು: ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ತಂಡವು ಸುರತ್ಕಲ್ ವ್ಯಾಪ್ತಿಯಲ್ಲಿ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ತೀವ್ರ ತಪಾಸಣೆ ನಡೆಸಿತು.
ಕ್ಲೌಡ್ ಕಿಚನ್ ಹಾಗೂ ಸೆಂಟ್ರಲ್ ಕೇಕ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳಿಂದ ಕೇಕ್ ಮತ್ತು ಐಸ್ಕ್ರೀಂಗಳನ್ನು ಸರಬರಾಜು ಮಾಡಿ ಮಾರಾಟ ಮಾಡುತ್ತಿರುವ ರಿಬ್ಬನ್ಸ್ ಅಂಡ್ ಬಲೂನ್ಸ್ ಹಾಗೂ ಹೈವ್ ಫ್ರಾಂಚೈಸಿ ಘಟಕಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಕೇಕ್ಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸಲಾಗುತ್ತಿರುವ ಬಣ್ಣಗಳ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿ, ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಕೇಕ್ಗಳ ಮಾದರಿಗಳನ್ನು ಸಂಗ್ರಹಿಸಲಾಯಿತು. ಕೇಕ್ಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಬಣ್ಣಗಳನ್ನು ಬಳಸಬಾರದು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಅಲ್ಲದೆ, ಹಬ್ಬದ ಸಂದರ್ಭಗಳಲ್ಲಿ ತಯಾರಿಸುವ ಸಿಹಿತಿಂಡಿಗಳಲ್ಲಿಯೂ ಅನಗತ್ಯ ಹಾಗೂ ಹಾನಿಕಾರಕ ಬಣ್ಣಗಳನ್ನು ಬಳಸದೆ, ಗುಣಮಟ್ಟ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸೂಚಿಸಲಾಯಿತು.
ಇದೇ ವೇಳೆ ಸುರತ್ಕಲ್ ವ್ಯಾಪ್ತಿಯ ವಿವಿಧ ಹೋಟೆಲ್ಗಳ ಮೇಲೂ ದಿಢೀರ್ ದಾಳಿ ನಡೆಸಿ ಪರಿಶೀಲನೆ ಮಾಡಲಾಯಿತು. ಹೋಟೆಲ್ಗಳ ಅಡುಗೆಮನೆಯ ಸ್ವಚ್ಛತೆ, ನೈರ್ಮಲ್ಯ ಹಾಗೂ ಆಹಾರ ತಯಾರಿಕೆಗೆ ಬಳಸುವ ಸಾಮಗ್ರಿಗಳ ಗುಣಮಟ್ಟವನ್ನು ಪರಿಶೀಲಿಸಲಾಯಿತು. ಆಹಾರ ತಯಾರಿಕೆಗೆ ಬಳಸುವ ವಿವಿಧ ಸಾಮಗ್ರಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಯಿತು.
ಹೋಟೆಲ್ಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಹೋಟೆಲ್ಗಳಿಗೆ ನೋಟಿಸ್ ನೀಡಲಾಯಿತು. ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ, ಸುರಕ್ಷಿತ ಮತ್ತು ಶುಚಿಯಾದ ಆಹಾರವನ್ನು ಒದಗಿಸುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತಾ ಇಲಾಖೆಯ ಇಂತಹ ಪರಿಶೀಲನಾ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.