ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ಸುರತ್ಕಲ್ ಪರಿಸರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ನರೇಶ್ ಶೆಣೈ, ವರುಣ್ ಚೌಟ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಸುರತ್ಕಲ್‌ಗೆ ಮೈದಾನ ಭಾಗ್ಯವಿಲ್ಲ; ಮಾರುಕಟ್ಟೆ ಕಾಮಗಾರಿ ವಿಳಂಬ

ಆಯುಕ್ತರ ಮುಂದೆ ನಾಗರಿಕರ ಅಳಲು, ಒಳಚರಂಡಿ ಸಮಸ್ಯೆ, ನೀರಿನ ಸೋರಿಕೆ ಪರಿಹಾರಕ್ಕೆ ಆಗ್ರಹ

ಮಂಗಳೂರು: ಸುರತ್ಕಲ್‌ನಲ್ಲಿ ಮಕ್ಕಳ ಆಟಕ್ಕೆ ಮೈದಾನವಿಲ್ಲ, ಬೃಹತ್ ಮಾರುಕಟ್ಟೆ ಕಾಮಗಾರಿ ಏಳೆಂಟು ವರ್ಷಗಳಿಂದ ಅಪೂರ್ಣ, ಕುಡಿಯುವ ನೀರಿನಲ್ಲೂ ಒಳಚರಂಡಿ ನೀರು ಸೋರಿಕೆ, ಬೀದಿದೀಪ, ಕುಡಿಯುವ ನೀರು, ಫುಟ್‌ಪಾತ್ ಅವ್ಯವಸ್ಥೆ ಸೇರಿದಂತೆ ಸಾಲು ಸಾಲು ಸಮಸ್ಯೆಗಳಿಂದ ಬಳಲುತ್ತಿರುವ ಸುರತ್ಕಲ್‌ನ ನಾಗರಿಕರು ಗುರುವಾರ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರ ಮುಂದೆ ಅಳಲು ತೋಡಿಕೊಂಡರು.

‘ವಾಕ್ ವಿತ್ ಕಮಿಷನರ್’ ಕಾರ್ಯಕ್ರಮದ ಅಂಗವಾಗಿ ಪಾಲಿಕೆಯ 8ನೇ ವಾರ್ಡ್‌ಗೆ ಭೇಟಿ ನೀಡಿದ ಆಯುಕ್ತರು ವಿವಿಧ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು.

ಮಾರುಕಟ್ಟೆ ನಿರ್ಮಾಣಕ್ಕೆ 8-10 ವರ್ಷ ಬೇಕೇ?

ಸುರತ್ಕಲ್‌ನಲ್ಲಿ ಮಕ್ಕಳು ಆಟವಾಡಲು ಸೂಕ್ತ ಮೈದಾನವಿಲ್ಲ. ವಾಹನ ಚಾಲನೆ ಕಲಿಯಲು ಕೂಡ ಸ್ಥಳಾವಕಾಶದ ಕೊರತೆಯಿದೆ. ಮೈದಾನಕ್ಕೆ ಮೀಸಲಿಡಬಹುದಾದ ಜಾಗ ತಾತ್ಕಾಲಿಕ ಮಾರುಕಟ್ಟೆಯಾಗಿ ಬಳಕೆಯಾಗುತ್ತಿದೆ. ಒಂದು ಮಾರುಕಟ್ಟೆ ನಿರ್ಮಾಣಕ್ಕೆ 8ರಿಂದ 10 ವರ್ಷ ಬೇಕೇ? ಎಂದು ಸಾಮಾಜಿಕ ಕಾರ್ಯಕರ್ತ ರಫೀಕ್ ಪ್ರಶ್ನಿಸಿದರು.

ಸುರತ್ಕಲ್ ಬೃಹತ್ ಮಾರುಕಟ್ಟೆ ಕಾಮಗಾರಿ ಪರಿಶೀಲಿಸಿದ ಆಯುಕ್ತರು, ವಿಳಂಬಕ್ಕೆ ಕಾರಣವೇನು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಹಿಳಾ ಮಂಡಳಿ ಜಾಗದಲ್ಲಿ ಲಿಫ್ಟ್ ಮತ್ತು ಮೆಟ್ಟಿಲು ನಿರ್ಮಾಣಕ್ಕೆ ಸಂಬಂಧಿಸಿದ ಜಾಗದ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಉಪ ಆಯುಕ್ತ ನರೇಶ್ ಶೆಣೈ ವಿವರಿಸಿದರು.

ಮುಡಾ ಮಾರುಕಟ್ಟೆಯ ವ್ಯಾಪಾರಿಗಳನ್ನು ಸ್ಥಳಾಂತರಿಸಿ ಕಾಮಗಾರಿ ಪೂರ್ಣಗೊಳಿಸಲು ಸಭೆ ಕರೆಯುವಂತೆ ಆಯುಕ್ತರು ಸೂಚಿಸಿದರು. ಮಾರುಕಟ್ಟೆ ಮುಂಭಾಗದ ಶೌಚಾಲಯ ಪರಿಶೀಲಿಸಿದ ಅವರು, ಸ್ವಚ್ಛತೆಗೆ ಆದ್ಯತೆ ನೀಡುವುದರ ಜತೆಗೆ ಆಧುನಿಕ ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ತಿಳಿಸಿದರು.

ಕುಡಿಯುವ ನೀರಿಗೂ ಒಳಚರಂಡಿ ಕಂಟಕ

ವಾರ್ಡ್ 7 ಮತ್ತು 8ರ ಒಳಚರಂಡಿ ಸಮಸ್ಯೆ ಕುರಿತು ಇಡ್ಯಾ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ವೈ. ರಾಘವೇಂದ್ರ ರಾವ್ ಮನವಿ ಸಲ್ಲಿಸಿದರು. ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಒಳಚರಂಡಿ ನೀರು ಸೋರಿಕೆಯಾಗುತ್ತಿರುವ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಒಳರಸ್ತೆಗಳಲ್ಲಿ ಬೆಳೆದಿರುವ ಹುಲ್ಲು ಕಟಾವು, ಬೀದಿನಾಯಿಗಳ ಹಾವಳಿ ನಿಯಂತ್ರಣ, ಬೀದಿದೀಪಗಳ ದುರಸ್ತಿ, ಫುಟ್‌ಪಾತ್‌ಗಳ ಸರಿಪಡಿಸುವಿಕೆ ಹಾಗೂ ಕಾನ-ಬಾಳ ರಸ್ತೆಯುದ್ದಕ್ಕೂ ವಾಕಿಂಗ್ ಟ್ರಾೃಕ್ ನಿರ್ಮಾಣದ ಬೇಡಿಕೆಗಳೂ ಕೇಳಿಬಂದವು. ಕಾನ ಬಳಿ ಅರ್ಧಕ್ಕೆ ನಿಂತಿರುವ ಕಾಂಕ್ರೀಟ್ ರಸ್ತೆ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

ಸ್ಟ್ರೀಟ್‌ಫುಡ್‌ಗೆ ಪ್ರತ್ಯೇಕ ವಲಯ

ಮಾಜಿ ಕಾರ್ಪೊರೇಟರ್ ವರುಣ್ ಚೌಟ ಅವರು ಸ್ಟ್ರೀಟ್‌ಫುಡ್ ವ್ಯಾಪಾರಕ್ಕೆ ಪ್ರತ್ಯೇಕ ವಲಯ ಗುರುತಿಸುವಂತೆ ಸಲಹೆ ನೀಡಿದರು. ಕೃಷ್ಣಾಪುರ, ಕಟ್ಲ ಹಾಗೂ ಚೊಕ್ಕಬೆಟ್ಟುವಿನಲ್ಲಿ ರಸ್ತೆ ಬದಿಯ ಆಹಾರ ಮಳಿಗೆಗಳಿಂದ ಉಂಟಾಗುತ್ತಿರುವ ಸಂಚಾರ ಅಡಚಣೆ ನಿವಾರಿಸುವ ಬಗ್ಗೆಯೂ ಚರ್ಚಿಸಲಾಯಿತು.

ಕಟ್ಲ ಜಂಕ್ಷನ್‌ನಿಂದ ಎಂಆರ್‌ಪಿಎಲ್ ರಸ್ತೆಯವರೆಗೆ ವಾಕಿಂಗ್ ಟ್ರಾೃಕ್ ಮತ್ತು ಫುಟ್‌ಪಾತ್ ನಿರ್ಮಿಸುವ ಸಾಧ್ಯತೆ ಪರಿಶೀಲಿಸಲು ಸೂಚಿಸಲಾಯಿತು. ಆರೋಗ್ಯ ಇಲಾಖೆ ಆವರಣದಲ್ಲಿ ಕಸದ ವಾಹನಗಳ ನಿಲುಗಡೆಗೆ ಪರ್ಯಾಯ ಸ್ಥಳ ಗುರುತಿಸುವುದು, ತಾವರೆಕೊಳ ಮತ್ತು ರೀಜೆಂಟ್ ಪಾರ್ಕ್ ಸಮೀಪ ಕ್ರೀಡಾಂಗಣ ಹಾಗೂ ಕೆರೆ ಅಭಿವೃದ್ಧಿಪಡಿಸುವ ಬಗ್ಗೆಯೂ ಸ್ಥಳ ಪರಿಶೀಲನೆ ನಡೆಯಿತು.

ವಾರ್ಡ್ 7ರಲ್ಲಿ ಬೀದಿದೀಪಗಳ ಸಮಸ್ಯೆ ತಕ್ಷಣ ಪರಿಹರಿಸುವಂತೆ ಸ್ಥಳೀಯ ಮಾಜಿ ಕಾರ್ಪೊರೇಟರ್ ನಯನ ಆರ್. ಕೋಟ್ಯಾನ್ ಮನವಿ ಮಾಡಿದರು. ತಾವರೆಕೊಳದ ಬಳಿ ವಾಕಿಂಗ್ ಟ್ರಾೃಕ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಂತೆಯೂ ಒತ್ತಾಯಿಸಿದರು.

25 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಸುಧಾರಣೆ

ಸರ್ಕಾರದಿಂದ 100 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 25 ಕೋಟಿ ರೂ. ವೆಚ್ಚದಲ್ಲಿ ಗುಡ್ಡೆಕೊಪ್ಲ ವೆಟ್‌ವೆಲ್ ದುರಸ್ತಿ ಹಾಗೂ ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ರಾಹುಲ್ ರತ್ನಂ ಪಾಂಡೆ ತಿಳಿಸಿದರು.

ಮಾರುಕಟ್ಟೆ ಕಾಮಗಾರಿ ಪೂರ್ಣಗೊಳಿಸುವುದು, ಆಟದ ಮೈದಾನ, ಸುಸಜ್ಜಿತ ಶೌಚಾಲಯ, ಫುಟ್‌ಪಾತ್ ಹಾಗೂ ಎಂಆರ್‌ಪಿಎಲ್ ರಸ್ತೆಯುದ್ದಕ್ಕೂ ವಾಕಿಂಗ್ ಟ್ರಾೃಕ್ ನಿರ್ಮಿಸುವ ಬೇಡಿಕೆಗಳ ಸಾಧ್ಯತೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಂದಿನಿ ನದಿ ಮಾಲಿನ್ಯಕ್ಕೆ ಪರಿಹಾರವೇನು?

ಮುಂಚೂರು ಎಸ್‌ಟಿಪಿಯಿಂದ ಸೋರಿಕೆಯಾಗುವ ತ್ಯಾಜ್ಯ ನೀರಿನಿಂದ ನಂದಿನಿ ನದಿ ಮಾಲಿನ್ಯವಾಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಸುಸಜ್ಜಿತ ಒಳಚರಂಡಿ ತ್ಯಾಜ್ಯ ಸಂಸ್ಕರಣ ಘಟಕದ ಅಗತ್ಯವಿದೆ ಎಂದರು. ಅಲ್ಲಿನ ನೀರನ್ನು ಪೈಪ್‌ಲೈನ್ ಮೂಲಕ ಎಂಆರ್‌ಪಿಎಲ್‌ಗೆ ಕೊಂಡೊಯ್ಯುವ ಯೋಜನೆ ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಪರ್ಯಾಯ ಕ್ರಮಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಸೇವನೆ

ವಾರ್ಡ್ ಭೇಟಿ ಬಳಿಕ ಆಯುಕ್ತರು ಸುರತ್ಕಲ್ ಇಂದಿರಾ ಕ್ಯಾಂಟೀನ್‌ಗೆ ತೆರಳಿ ದೋಸೆ ಮತ್ತು ಪಲಾವ್ ಸೇವಿಸುವ ಮೂಲಕ ಆಹಾರದ ಗುಣಮಟ್ಟ ಪರಿಶೀಲಿಸಿದರು. ಆಯುಕ್ತರು ಸ್ವತಃ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.