ಬೆಳ್ತಂಗಡಿ: ಗೇರುಕಟ್ಟೆ ಸಂಬೊಳ್ಯ ಬರಮೇಲು ಎಂಬಲ್ಲಿ ಬೆಳಗ್ಗೆ ದೇವಸ್ಥಾನಕ್ಕೆ ಹೊರಟಿದ್ದ ಬಾಲಕನೊಬ್ಬ ಶವವಾಗಿ ಕೆರೆಯಲ್ಲಿ ಪತ್ತೆಯಾದ ಘಟನೆ ನಡೆದಿದ್ದು, ಇದೊಂದು ತಲೆಗೆ ಬಲವಾದ ಏಟು ನೀಡಿ ವ್ಯವಸ್ಥಿತ ಕೊಲೆ ಸಾಧ್ಯತೆಯನ್ನು ಮರಣೋತ್ತರ ಪರೀಕ್ಷೆಯ ಪ್ರಥಮಿಕ ವರದಿ ದೃಡೀಕರಿಸಿದೆ.
ಗೇರುಕಟ್ಟೆ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ (16) ಮೃತ ಬಾಲಕ. ಧನು ಮಾಸದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಸುಮಂತ್ ಪ್ರತಿ ದಿನ ನಾಳ ಶ್ರೀದುರ್ಗಾಪರಮೇಶ್ವರಿ ದೇವಾಲಯಕ್ಕೆ ಬೆಳಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದ. ಅದರಂತೆ ಧನು ಸಂಕ್ರಮಣದ ಕೊನೇಯ ದಿನವಾದ ಬುಧವಾರ ಬೆಳಗ್ಗೆ ಮನೆಯಿಂದ ಬೆಳಗ್ಗೆ 4.30 ಗಂಟೆಗೆ ದೇವಸ್ಥಾನಕ್ಕೆ ತೆರಳಿದ್ದ. ಆದರೆ ಆನಂತರ ಮನೆಗೆ ಹಿಂತಿರುಗದೇ ಇದ್ದಾಗ ಮನೆಯವರು ಹುಡುಕಾಡಿದ್ದು 500 ಮೀಟರ್ ದೂರದ ಕೆರೆಯಲ್ಲಿ ಶವ ಪತ್ತೆಯಾಗಿತ್ತು.
ಆರಂಭದಲ್ಲಿ ಸುಮಂತ್‌ನನ್ನು ಚಿರತೆ ಒಯ್ದಿರುವ ಬಗ್ಗೆ ಸ್ಥಳಿಯರಲ್ಲಿ ಪ್ರಚಾರ ಹಬ್ಬಿದ್ದು, ಬೆಳ್ತಂಗಡಿ ಅಗ್ನಿಶಾಮಕದಳದ ಸಿಬ್ಬಂದಿಗಳು ಸಮೀಪದ ಕೆರೆಯಲ್ಲಿ ಹುಡುಕಾಡಿದಾಗ ಬಾಲಕನ ದೇಹ ಪತ್ತೆಯಾಯಿತು. ಬಾಲಕನ ದೇಹದಲ್ಲಿ ಗಾಯದ ಗುರುತುಗಳಿದ್ದು ಇದು ಕೆರೆಗೆ ಬಿದ್ದ ಸಂದರ್ಭದಲ್ಲಿ ಆಗಿರುವ ಗಾಯಗಳೇ ಎಂಬ ಸಂಶಯ ಮೂಡಿತ್ತು. ಸ್ಥಳಕ್ಕೆ ಎಸ್ಪಿ ಅರುಣ್ ಭೇಟಿ ನೀಡಿದ್ದು ಪೋಸ್ಟ್ ಮಾಟರ್ಂನ ಬಳಿಕ ತನಿಖೆ ನಡೆಸಿ ಸತ್ಯಾಂಶ ಹೊರತೆಗೆಯುವುದಾಗಿ ತಿಳಿಸಿದ್ದರು.
ತಲೆಗೆ ಬಲವಾದ ಏಟು
ಮೃತ ವಿದ್ಯಾರ್ಥಿ ಸುಮಂತ್ ಮೃತದೇಹವನ್ನು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದು, ತಲೆಗೆ ಕತ್ತಿ, ಇತರೆ ಆಯುಧದಿಂದ ಬಲವಾದ 3 ಏಟು ನೀಡಿದ ಗುರುತು ಪತ್ತೆಯಾಗಿದೆ. ಬಲವಾದ ಒಡೆತಕ್ಕೆ ತಲೆ ಒಡೆದೆ ಹೋಗಿತ್ತು, ಸುಮಂತ್ ತಲೆಗೆ ಬಲವಾದ ಏಟು ನೀಡಿ ಕೆರೆ ಬಳಿಗೆ ಎತ್ತಿಕೊಂಡುಹೋಗಿ ಅರೆ ಪ್ರಜ್ಞಾವಸ್ಥೆಯಲ್ಲೇ ನೀರಿಗೆ ಹಾಲಿರುವ ಸಾಧ್ಯತೆ ಇದೆ. ಶ್ವಾಸ ಕೋಶಕ್ಕೆ ನೀರು ತುಂಬಿ ಹಾನಿಯಾದ ಬಗ್ಗೆ ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ತಲೆಗೆ ಏಟು ಬಿದ್ದ ಕೂಡಲೇ ಅರೆ ಪ್ರಜ್ಞಾವಸ್ಥೆಯಾದ ಕಾರಣ ಸುಮಂತ್‌ಗೆ ಯಾವುದೇ ಪ್ರತಿರೋಧ ನೀಡಲು ಸಾಧ್ಯವಾಗಿಲ್ಲ ಎಂಬ ಅನುಮಾನ ಮೂಡಿದೆ. ಇದಕ್ಕೆ ಸಾಕ್ಷೃನೀಡುವಂತೆ ದೇಹ ಪತ್ತೆಯಾದ ಸಂದರ್ಭ ಮೃತ ಸುಮಂತ್ ಕಾಲಿನಲ್ಲೇ ಚಪ್ಪಲಿಗಳು ಇತ್ತು ಎಂದು ಪ್ರತ್ಯಕ್ಷದರ್ಶಿಗಳು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.