suicide 
ದಕ್ಷಿಣ ಕನ್ನಡ

ಪೊಲೀಸ್ ವಿಚಾರಣೆಗೆ ಹೆದರಿ ಆತ್ಮಹತ್ಯೆ

ನೆರೆಮನೆಯಲ್ಲಿ ನಗ-ನಗದು ಕಳವು ಪ್ರಕರಣ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನಯಾಲ್ ಪೆರಿಯಡ್ಕ ಸಮೀಪ ಮನೆಯೊಂದರಲ್ಲಿ ನಡೆದಿದ್ದ ಚಿನ್ನಾಭರಣ, ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬರುವಂತೆ ಪೊಲೀಸರು ನೀಡಿದ ನೋಟಿಸ್‌ಗೆ ಹೆದರಿ ನೆರೆಮನೆ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೇಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿ, ಪ್ರಸ್ತುತ ಪನಯಾಲ್ ಪೆರಿಯಡ್ಕ ನೀರಾಟ್ಟಿ ಕೊಟ್ಟಿಯಲ್ ಎಂಬಲ್ಲಿ ವಾಸಿಸುತ್ತಿದ್ದ ಬಾಲಕೃಷ್ಣನ್(58) ಆತ್ಮಹತ್ಯೆ ಮಾಡಿಕೊಂಡವರು. ಧನ್ಯಾ ಎಂಬುವರ ಗುರುವಾರ ಬೆಳಗ್ಗೆ ಮನೆಗೆ ಬೀಗ ಹಾಕಿ ಕೀಯನ್ನು ವಿದ್ಯುತ್ ಮೀಟರ್ ಬಾಕ್ಸ್‌ನಲ್ಲಿಟ್ಟು ವಾಕಿಂಗ್‌ಗೆ ಹೋಗಿದ್ದರು. ಮನೆಯ ಮೇಲಂತಸ್ತಿನಲ್ಲಿ ಪುತ್ರಿ ಮಲಗಿದ್ದರು.

ಧನ್ಯಾ ವಾಕಿಂಗ್ ಮುಗಿಸಿ ಬಂದಾಗ ಮನೆ ಬೀಗ ತೆಗೆದು ಐದು ಪವನ್ ಚಿನ್ನ ಹಾಗೂ ಹಾಗೂ 3 ಸಾವಿರ ರೂ. ನಗದು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬೇಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶ್ವಾನದಳದೊಂದಿಗೆ ಪರಿಶೀಲನೆಗೆ ಆಗಮಿಸಿದಾಗ ಶ್ವಾನ ಕಳವು ನಡೆದ ಮನೆಯಿಂದ 200 ಮೀ. ದೂರದಲ್ಲಿರುವ ಬಾಲಕೃಷ್ಣನ್ ಅವರ ಮನೆ ಬಳಿ ಹೋಗಿ ನಿಂತಿತ್ತು. ಈ ಹಿನ್ನೆಲೆಯಲ್ಲಿ ಬಾಲಕೃಷ್ಣನ್ ಸೇರಿದಂತೆ ಇನ್ನೊಬ್ಬರಿಗೆ ವಿಚಾರಣೆಗೆ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದರು.