ವರುಣ್ 
ದಕ್ಷಿಣ ಕನ್ನಡ

ಎಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಫಲಿತಾಂಶ ಬರುವ ಮುನ್ನವೇ ಮೃತ್ಯು

ಮಂಗಳೂರು: ನಗರದ ಮಹಾಕಾಳಿಪಡ್ಪು ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಬಾಲಕನೋರ್ವ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕು ಬನ್ನಿಹಟ್ಟಿ ಗ್ರಾಮದವರಾಗಿದ್ದು, ಮಹಾಕಾಳಿಪಡ್ಪುವಿನ ನಿರ್ಮಲ ನಗರದಲ್ಲಿ ವಾಸವಾಗಿರುವ ಕಣ್ಣನ ಗೌಡ ಎಂಬವರ ಪುತ್ರ ವರುಣ್ (15) ಮೃತಪಟ್ಟವರು.
ಎ.11ರಂದು ಶನಿವಾರ ಮಹಾಕಾಳಿಪಡ್ಪು ಅಂಡರ್ ಪಾಸ್ ಬಳಿಯ ಭಜನಾಮಂದಿರದ ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಚೆಂಡು ಮಂದಿರದ ಛಾವಣಿಗೆ ಬಿದ್ದಿದೆ. ಅದನ್ನು ತೆಗೆಯಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವರುಣ್ ವಾರದ ಹಿಂದೆಯಷ್ಟೇ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದು ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ತಂದೆ ಕಣ್ಣನ ಗೌಡ ಮಹಾಕಾಳಿಪಡ್ಪುವಿನಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ವರುಣ್ ಮೂವರು ಮಕ್ಕಳಲ್ಲಿ ಮಧ್ಯದವನಾಗಿದ್ದು, ತಂದೆ-ತಾಯಿ, ಓರ್ವ ಅಣ್ಣ ಮತ್ತು ಮೂರುವರೆ ವರ್ಷದ ತಂಗಿಯನ್ನುಅಗಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಬಾಲಕನ ಮನೆಗೆ ಭೇಟಿ ನೀಡಿದ್ದು, ಹೆತ್ತವರಿಗೆ ಸಾಂತ್ವನ ಹೇಳಿ, ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.