ಹೊಂಡಮಯ ಗೋಳಿತ್ತಡಿ-ತ್ರಿವೇಣಿಸರ್ಕಲ್-ಕುದುಲೂರು-ಏಣಿತಡ್ಕ ಸಂಪರ್ಕ ರಸ್ತೆ ದುರಸ್ತಿಗಾಗಿ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಸುಂದರ ನಾಯ್ಕ ಚೆಕ್ಕಿತಡ್ಕ, ಭವಾನಿಶಂಕರ ಗೌಡ ಪರಂಗಾಜೆ ಮೊದಲಾದವರಿದ್ದರು  
ದಕ್ಷಿಣ ಕನ್ನಡ

ಸುಸಜ್ಜಿತ ರಸ್ತೆಗಾಗಿ ಹೋರಾಟ

ಹದಗೆಟ್ಟ ಗೋಳಿತ್ತಡಿ-ಏಣಿತಡ್ಕ-ಕುದುಲೂರು ಸಂಪರ್ಕ ರೋಡ್

ಪ್ರವೀಣ್ ರಾಜ್ ಕೊಯಿಲ ಕಡಬ

ಕಡಬ ತಾಲೂಕು ಕೊಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ-ತ್ರಿವೇಣಿ ಸರ್ಕಲ್- ಏಣಿತಡ್ಕ- ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಂದ ಸಂಚಾರ ದುಸ್ತರವಾಗಿದ್ದು, ಆಕ್ರೋಶಗೊಂಡ ರಸ್ತೆ ಫಲಾನುಭವಿಗಳು ಸುಸಜ್ಜಿತ ರಸ್ತೆಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.

ಈ ರಸ್ತೆಯ ಗೋಳಿತ್ತಡಿಯಿಂದ ತ್ರೀವೇಣಿ ಸರ್ಕಲ್ ತನಕದ ಸುಮಾರು 2.5 ಕಿ.ಮೀ. ದೂರದ ತನಕ ಹೆಚ್ಚು ಹೊಂಡಗಳು ನಿರ್ಮಾಣವಾಗಿ ಸಂಚಾರಕ್ಕೆ ಅಯೋಗ್ಯವಾಗಿದೆ. ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಹಲವಾರು ವರ್ಷಗಳಿಂದ ತೇಪೆ ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುತ್ತಿದೆಯೇ ಹೊರತು ಅಭಿವೃದ್ಧಿ ಕಂಡಿಲ್ಲ. ಪ್ರತಿ ಬಾರಿ ಮಳೆಗಾಲದ ಆರಂಭದಲ್ಲೇ ತೇಪೆ ಕಿತ್ತು ಬಂದು ಮತ್ತೆ ಹೊಂಡಗಳು ಬಾಯ್ತೆರೆದುಕೊಳ್ಳುತ್ತವೆ.

ತೇಪೆ ಹಾಕಿದಷ್ಟೂ ಬಾಯ್ದೆರೆಯುವ ಹೊಂಡಗಳು: 35 ವರ್ಷಗಳ ಹಿಂದೆ ಈ ರಸ್ತೆ ನಿರ್ಮಾಣವಾಗಿತ್ತು. 8 ವರ್ಷಗಳ ಹಿಂದೆ ನಬಾರ್ಡ್ ಯೋಜನೆಯಡಿಯಲ್ಲಿ ಸುಮಾರು 34 ಲಕ್ಷ ರೂ. ವೆಚ್ಚದಲ್ಲಿ ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ಮರುಡಾಂಬರೀಕರಣ ಮಾಡಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ರಸ್ತೆಯಲ್ಲಿ ಹೊಂಡಗಳು ಕಾಣಿಸಲಾರಂಭಿಸಿದವು. ಕಳಪೆ ಕಾಮಗಾರಿಯ ಅಸಮಾಧಾನದ ಬೆನ್ನಲ್ಲೇ ಮರುಡಾಂಬರೀಕರಣ ಮಾಡಿದರೂ ಮುಂದಿನ ವರ್ಷ ಮತ್ತೆ ಹೊಂಡಗಳು ಸೃಷ್ಟಿಯಾಯಿತು. ನಂತರ ಅಂದಿನ ಶಾಸಕ ಎಸ್.ಅಂಗಾರ ಅವರ ಶಿಫಾರಸಿನಂತೆ ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ತನಕ 4.50 ಲಕ್ಷ ರೂ. ವೆಚ್ಚದಲ್ಲಿ ತೇಪೆ ಕಾರ್ಯ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಶಿಫಾರಸಿನಂತೆ ಕಳೆದ ವರ್ಷ 9.13 ಲಕ್ಷ ರೂ. ವೆಚ್ಚದಲ್ಲಿ ತೇಪೆ ಹಾಕಲಾಗಿತ್ತು. ಆದರೆ ರಸ್ತೆ ಮತ್ತೆ ಹೊಂಡಮಯವಾಗಿದೆ.

ಫಲಾನುಭವಿಗಳ ಸಭೆ, ಹೋರಾಟದ ನಿರ್ಧಾರ: ಈ ರಸ್ತೆಯ ಫಲಾನುಭವಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ವಿವಿಧ ರಾಜಕೀಯ ಪಕ್ಷದ ಮುಖಂಡರು, ಸ್ಥಳೀಯ ಮುಂದಾಳುಗಳು ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿದ್ದಾರೆ. ಮೊದಲ ಹಂತದಲ್ಲಿ ರಸ್ತೆ ದುಸ್ಥಿತಿ ಬಗ್ಗೆ ಕ್ಷೇತ್ರದ ಶಾಸಕರು, ಸಂಸದರು, ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷದ ಜಿಲ್ಲಾಮಟ್ಟದ ಮುಖಂಡರು, ಸ್ಥಳೀಯಾಡಳಿತದ ಅಧಿಕಾರಿಗಳಿಗೆ ಮನವರಿಕೆ ಮಾಡಿ ತಕ್ಷಣ ಕ್ರಮ ಕೈಗೊಳ್ಳುವ ಬಗ್ಗೆ ಮನವಿ ಸಲ್ಲಿಸುವುದು. ಭರವಸೆ ಈಡೇರದಿದ್ದರೆ ಉಗ್ರ ಹೋರಾಟ, ಮತದಾನ ಬಹಿಷ್ಕಾರ ಮೊದಲಾವುಗಳನ್ನು ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಗಿದೆ.

ಈಗಾಗಲೇ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ರಸ್ತೆಗೆ 800 ಮೀಟರ್‌ನಷ್ಟು ಡಾಂಬರೀಕರಣಕ್ಕೆ ಅನುದಾನ ಬಿಡುಗಡೆಗೊಂಡಿದೆ. ಈ ಕಾಮಗಾರಿಯನ್ನು ನಡೆಸಿ ತ್ರಿವೇಣಿ ಸರ್ಕಲ್ ತನಕ ಬೇರೆ ಅನುದಾನ ಹೊಂದಿಸಿಕೊಂಡು ಡಾಂಬರೀಕರಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೋರಾಟದ ಮುಂದಾಳು ಸುಂದರ ನಾಯ್ಕ ಚೆಕ್ಕಿತಡ್ಕ ತಿಳಿಸಿದ್ದಾರೆ. ಮನವಿ ಸಲ್ಲಿಕೆ ವೇಳೆ ಭವಾನಿಶಂಕರ ಗೌಡ ಪರಂಗಾಜೆ, ರಾಮಚಂದ್ರ ನಾಯ್ಕ ಏಣಿತಡ್ಕ, ಸುಂದರ ನಾಯ್ಕ ಚೆಕ್ಕಿತಡ್ಕ, ಭರತ್ ಒ.ಕೆ, ಚಿದಾನಂದ ಪನ್ಯಾಲು, ಪ್ರವೀಣ್ ನೀಡೇಲು, ಗಣೇಶ್ ಎರ್ಮಡ್ಕ, ಸಾಂತಪ್ಪ ಗೌಡ ಕೊಲ್ಯ, ಉಮೇಶ್ ಸಂಕೇಶ ಇದ್ದರು.

ಮರಳು ಲಾರಿಗಳ ಸಂಚಾರದಿಂದ ಶಿಥಿಲ

ದಿನನಿತ್ಯ ಸಾವಿರಾರು ಜನ, ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಮಳೆೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿ ಅವಘಡಗಳಿಗೆ ದಾರಿಯಾಗುತ್ತಿದೆ. ಪರಂಗಾಜೆ ಮತ್ತು ಏಣಿತಡ್ಕದಲ್ಲಿ ಕುಮಾರಧಾರಾ ನದಿಯಿಂದ ಮರಳುಗಾರಿಕೆ ನಡೆಸುವ ಟನ್‌ಗಟ್ಟಲೆ ಭಾರದ ಲಾರಿಗಳು ಓಡಾಡುವುದರಿಂದ ರಸ್ತೆ ಇನ್ನಷ್ಟೂ ಶಿಥಿಲವಾಗಲು ಕಾರಣ ಎನ್ನುವ ಆರೋಪವೂ ವ್ಯಕ್ತವಾಗಿದೆ. ಸಂಪೂರ್ಣ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕೆನ್ನುವುದು ಸ್ಥಳಿಯರ ಆಗ್ರಹ. ಏಣಿತಡ್ಕದಿಂದ ಕಕ್ವೆ, ಪಜ್ಜಾಪು ಮೂಲಕ ಆಲಂಕಾರು ಪೇಟೆಗೂ ಸಂಪರ್ಕ ಕಲ್ಪಿಸುತ್ತದೆ.

ಅನುದಾನ ಬಿಡುಗೆಯಾದರೂ ಕೆಲಸವಾಗಿಲ್ಲ

ಈ ರಸ್ತೆಯ ಗೋಳಿತ್ತಡಿಯಿಂದ ಸುಮಾರು 800 ಮೀ.ನಷ್ಟು ಉದ್ದಕ್ಕೆ ಡಾಂಬರೀಕರಣಕ್ಕೆ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ದಿ ಯೋಜನೆಯಡಿ ಶಾಸಕಿ ಭಾಗೀರಥಿ ಮುರುಳ್ಯ ಶಿಫಾರಸಿನಂತೆ ಸುಮಾರು 40 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಆದರೆ ಡಾಂಬರು ಲಭ್ಯವಿಲ್ಲ ಎಂದು ಗುತ್ತಿಗೆದಾರರು ಕಾಮಗಾರಿ ಆರಂಭಿಸಲಿಲ್ಲ. ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭಗೊಳ್ಳುವ ಭರವಸೆಯನ್ನು ಶಾಸಕರು ನೀಡಿದ್ದಾರೆ.