ಗುರುಪುರ: ಕುಡಿತ ಮೂಲೋಚ್ಛಾಟನೆ ಕಷ್ಟವಾಗಿದ್ದರೂ ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಯತ್ನ ಶ್ಲಾಘನೀಯ. ಕುಡಿತದಿಂದ ವ್ಯಕ್ತಿಯ ಆರೋಗ್ಯ ಕೆಟ್ಟರೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ದೃಢ ಸಂಕಲ್ಪದಿಂದ ಈ ವ್ಯಸನದಿಂದ ಹೊರಬಂದು ಗೌರವಯುತ ಜೀವನ ನಡೆಸಲು ಸಾಧ್ಯವಿದೆ ಎಂದು ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಜಜಪೆ ಯೋಜನಾ ಕಚೇರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬಜ್ಪೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಬಜ್ಪೆ, ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ(ಕ್ಷೇಮ), ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ, ಗುರುಪುರ ವ್ಯ.ಸೇ.ಸ.ಸಂಘ ಜಂಟಿ ಆಶ್ರಯ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಯೋಗದಲ್ಲಿ ನ.7ರ ವರೆಗೆ ಗುರುಪುರ ಬಿಲ್ಲವ ಸಂಘದ ಸಭಾಭವನದಲ್ಲಿ ಆಯೋಜಿಸಲಾದ 2144ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು.
ಗುರುಪುರ 2144ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮತಿ ಅಧ್ಯಕ್ಷ ಮಹಾಬಲ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ನ ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಗುರುಪುರ ವ್ಯ.ಸೇ.ಸ.ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ, ಗುರುಪುರ ಪಿಡಿಒ ಪಂಕಜಾ ಶೆಟ್ಟಿ, ಮಂಗಳೂರು ತಾಲೂಕು ಅ.ಕ. ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷೆ ಸುಖಲತಾ ಶೆಟ್ಟಿ, ಬಜ್ಪೆಯ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಭುವನಾಭಿರಾಮ ಉಡುಪ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್ ಬರಿಪಟ್ಲ, ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಸತೀಶ್ ಕಾವ ಶುಭ ಹಾರೈಸಿದರು.
ಬಜ್ಪೆ ಯೋಜನಾ ಕಚೇರಿ ಯೋಜನಾಧಿಕಾರಿ ಗಿರೀಶ್ ಕುಮಾರ್ ಎಂ. ಸ್ವಾಗತಿಸಿದರು. ಪ್ರಮುಖರಾದ ಉದಯ ಆಳ್ವ, ಡಾ. ಯೋಗೀಶ್ ತಂತ್ರಿ, ಹರಿಕೇಶ್ ಶೆಟ್ಟಿ ನಡಿಗುತ್ತು, ಶೋಭಾ ಗುರುಪುರ, ಯಶವಂತ್ ತೊಪೆಕಲ್ಲು, ಯಶೋಧರ ಅಡ್ಡೂರು, ದಯಾನಂದ ಕಾಜಿಲ, ಲೋಕನಾಥ ಕಾಜಿಲ, ಹರೀಶ್ ಮಟ್ಟಿ, ವಲಯಾಧ್ಯಕ್ಷರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಶಿಬಿರಾರ್ಥಿಗಳು ಇದ್ದರು. ಗುರುಪುರ ವಲಯ ಮೇಲ್ವಿಚಾರಕಿ ಪವಿತ್ರಾ ನಿರೂಪಿಸಿ, ಗುರುಪುರ ಶಿಬಿರ ಸಮಿತಿ ಕೋಶಾಧಿಕಾರಿ ಸುಭಾಷ್ಚಂದ್ರ ಎನ್. ಎಚ್.ವಂದಿಸಿದರು.