ಬೀದಿನಾಯಿಗಳ ಗುಂಪು ತೆಯ್ಯಂಗೆ ಎದುರಾಗಿರುವುದು.
ಕುಂಬಳೆ: ಸಂಪ್ರದಾಯದಂತೆ ದೇವಾಲಯಗಳಿಗೆ ಭೇಟಿ ನೀಡಲು ತೆರಳಿದ್ದ ತೆಯ್ಯಂ ಮೇಲೆಯೇ ಎರಗಲು ಮುಂದಾದ ಬೀದಿನಾಯಿಗಳ ಗುಂಪೊಂದು ತೆಯ್ಯಂ ಕೈ ಎತ್ತಿ ಗಂಟೆ ಬಾರಿಸಿದ ಕ್ಷಣ ಮಾತ್ರದಲ್ಲಿ ದಿಕ್ಕಾಪಾಲಾಗಿ ಓಡಿದೆ. ಬುಧವಾರ ಬೆಳಗಿನ ಜಾವ ಕಣ್ಣೂರು ನಡುವಿಲಿ ಅಂಗನವಾಡಿ ಬಳಿ ಈ ವಿದ್ಯಮಾನ ಗ್ರಾಮಸ್ಥರನ್ನು ಬೆರಗುಗೊಳಿಸಿದೆ.
ಇಲ್ಲಿಂದ ಎರಡು ಕಿಲೋಮೀಟರ್ ದೂರದ, ಪಲ್ಲಿತ್ತಟ್ಟು ಮನ್ನಂಕಂಡಿ ತರವಾಡು ದೈವಸ್ಥಾನದಲ್ಲಿ ಕಟ್ಟಲಾದ ಅಲಕ್ಕುನ್ನು ಚಾಮುಂಡಿ ತೆಯ್ಯಂ ವಾಡಿಕೆಯಂತೆ ಪಶ್ಚಿಮದಲ್ಲಿರುವ ಚುಜಾಲಿ ಭಗವತಿ ದೇವಸ್ಥಾನ, ಪೊಲ್ಲೊಲಿಡಂ ಮತ್ತು ಒತಯೋತಿಡಂ ತರವಾಡ ದೇವಸ್ಥಾನಗಳಿಗೆ ಭೇಟಿ ನೀಡುವ ಆಚರಣೆ ವೇಳೆ ನಾಯಿಗಳ ದಂಡು ದಾಳಿಗೆ ಯತ್ನಿಸಿದೆ. ಬೆಳಗ್ಗೆ, ಪೆರುವಟ್ ಪಚ್ಚಿಲ್ ಆಚರಣೆ ಭಾಗವಾಗಿ ತರವಾಡು ದೇವಸ್ಥಾನಗಳಿಗೆ ಭೇಟಿ ನೀಡಲು ತೆಯ್ಯಂ ಕಟ್ಟಲಾಗಿದ್ದ ಸ್ಥಳದಿಂದ ಯಾವುದೇ ಬೆಂಗಾವಲುದಾರರು ಅಥವಾ ವಾದ್ಯೋಪಕರಣಗಳ ವಾದಕರಿಲ್ಲದೆ ತೆಯ್ಯಂ ಒಂಟಿಯಾಗಿತ್ತು.
ಬೀದಿ ನಾಯಿಗಳು ಓಡಿ ಬಂದಾಗ, ತೆಯ್ಯಂ ಜೋರಾಗಿ ನಗುತ್ತಾ ಕೈ ಎತ್ತಿ ಗಂಟೆಯ ಶಬ್ದ ಮಾಡಿತು. ನಾಯಿಗಳು ಓಡುತ್ತಿದ್ದಂತೆ, ತೆಯ್ಯಂ ಪೆರುವಟ್ ತನ್ನ ಪ್ರಯಾಣವನ್ನು ಮುಂದುವರೆಸಿತು. ತ್ರಿಕರಿಪುರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಆದಿತ್ಯನಾಥ್(19) ಈ ತೆಯ್ಯಂ ಕಟ್ಟಿದ್ದರು. ತೆಯ್ಯಂ ವೀಕ್ಷಿಸಲು ರಸ್ತೆ ಬದಿಯಲ್ಲಿ ನಿಂತಿದ್ದ ಮಾಜಿ ಪಂಚಾಯತಿ ಕಾರ್ಯದರ್ಶಿ ಎ.ವಿ.ಪ್ರಕಾಶನ್ ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.