ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದ್ದು, ಚಿಕಿತ್ಸೆಗೆ ಆಗಮಿಸುವವರಲ್ಲಿ ಭೀತಿ ಹೆಚ್ಚಲು ಕಾರಣವಾಗಿದೆ. 
ದಕ್ಷಿಣ ಕನ್ನಡ

ಜನರಲ್ ಆಸ್ಪತ್ರೆಯಲ್ಲಿ ಬೀದಿನಾಯಿ ಕಾಟ

ಕಾಸರಗೋಡು: ಬೀದಿಗಳಲ್ಲಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ನಾಯಿಗಳು ನಗರದ ಜನರಲ್ ಆಸ್ಪತ್ರೆ ವಠಾರದಲ್ಲಿ ತುಂಬಿಕೊಂಡಿದೆ. ಇದು ಚಿಕಿತ್ಸೆಗೆ ಆಗಮಿಸುವ ರೋಗಿಗಳಲ್ಲಿ ಭೀತಿಗೆ ಕಾರಣವಾಗಿದೆ.

ಆಸ್ಪತ್ರೆ ವಠಾರದಲ್ಲಿ ಬೀದಿನಾಯಿಗಳು ತುಂಬಿಕೊಂಡಿರುವುದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ನೆಲ್ಲಿಕುಂಜೆ ಪ್ರದೇಶದಲ್ಲಿ ಬೀದಿನಾಯಿ ಕಡಿತದಿಂದ ವಿದ್ಯಾರ್ಥಿ ಸೇರಿದಂತೆ ಹಲವು ಮಂದಿ ಗಾಯಗೊಂಡಿರುವ ಘಟನೆ ಹಸಿರಾಗಿರುವ ಮಧ್ಯೆ ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ಬೀದಿನಾಯಿಗಳು ವ್ಯಾಪಕವಾಗಿ ಅಡ್ಡಾಡುತ್ತಿರುವುದು ಜನರಲ್ಲಿ ಭೀತಿ ಹೆಚ್ಚಿಸಿದೆ. ಆಸ್ಪತ್ರೆ ಆಸುಪಾಸು ಲಭಿಸುವ ಆಹಾರ ವಸ್ತುಗಳಿಗಾಗಿ ಬೀದಿನಾಯಿಗಳು ಇಲ್ಲಿ ಬಂದು ಸೇರಿಕೊಳ್ಳುತ್ತಿವೆ. ನಗರದಲ್ಲಿ ಭಾನುವಾರ ಒಂದೇ ದಿನ ಆರು ಮಂದಿಗೆ ಬೀದಿನಾಯಿಗಳು ಕಚ್ಚಿದ್ದು, ಕೆಲವು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿವೆ.

*ತ್ಯಾಜ್ಯ ಸುರಿಯುವಿಕೆ ಕಾರಣ: ಸಾರ್ವಜನಿಕ ಸ್ಥಳದಲ್ಲಿ ವ್ಯಾಪಕವಾಗಿ ತ್ಯಾಜ್ಯ ಸುರಿಯುತ್ತಿರುವುದು ಬೀದಿನಾಯಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಜಿಲ್ಲೆಯ ನಾನಾ ಕಡೆ ಅನಧಿಕೃತ ಕಸಾಯಿಖಾನೆ ತಲೆ ಎತ್ತುತ್ತಿದ್ದು, ಇಲ್ಲಿಂದ ಹೊರಬೀಳುವ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಡುತ್ತಿರುವುದರಿಂದ ತ್ಯಾಜ್ಯ ಅರಸಿಕೊಂಡು ಬರುವ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.