ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ವತಿಯಿಂದ ಮೇ 17 ಮತ್ತು 18 ರಂದು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಗೇರು ಮೇಳ-2026 ಆಯೋಜಿಸಲಾಗಿದೆ ಎಂದು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ತಿಳಿಸಿದ್ದಾರೆ. 
ದಕ್ಷಿಣ ಕನ್ನಡ

ಮಂಗಳೂರಿನಲ್ಲಿ ಮೇ 17, 18 ರಂದು ರಾಜ್ಯಮಟ್ಟದ ಗೇರು ಮೇಳ

ಮಂಗಳೂರು: ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ವತಿಯಿಂದ ಮೇ 17 ಮತ್ತು 18 ರಂದು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಗೇರು ಮೇಳ-2026 ಆಯೋಜಿಸಲಾಗಿದೆ ಎಂದು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 17 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಮೇಳವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಫರೀದ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮೇಳದಲ್ಲಿ ಗೋಡಂಬಿ ಕೃಷಿ ಮತ್ತು ಆಧುನಿಕ ತಂತ್ರಜ್ಞಾನದ ಬಗ್ಗೆ ಎರಡು ದಿನಗಳ ಕಾರ್ಯಾಗಾರ ನಡೆಯಲಿದೆ. ಮೇ 17 ರಂದು ಐಸಿಎಆರ್-ಡಿಸಿಆರ್ ಪುತ್ತೂರಿನ ನಿರ್ದೇಶಕ ಡಾ. ಜೆ. ದಿನಕರ ಅಡಿಗ ಮತ್ತು ಹಿರಿಯ ವಿಜ್ಞಾನಿ ಡಾ. ವೀಣಾ ಜಿ.ಎಲ್. ಗೌಡ ಅವರಿಂದ ಕೃಷಿ ತಂತ್ರಜ್ಞಾನ ಹಾಗೂ ಮೌಲ್ಯ ಸೇರ್ಪಡೆ ಕುರಿತು ಮಾಹಿತಿ ಇರಲಿದೆ. ಪ್ರಗತಿಪರ ರೈತರಾದ ಸುಭಾಸ್ ರೈ ಮತ್ತು ವಿಶ್ವಕೇಶವ ಅನುಭವ ಹಂಚಿಕೊಳ್ಳಲಿದ್ದಾರೆ. ಮೇ 18ರಂದು ಕೆಸಿಎಂಎ ಮಾಜಿ ಅಧ್ಯಕ್ಷ ಪ್ರಕಾಶ್ ಕಲ್ಭಾವಿ, ಕೊಚ್ಚಿಯ ಡಾ. ವೆಂಕಟೇಶ್ ಎನ್. ಹುಬ್ಬಳ್ಳಿ, ದಾದಾಸಾಹೇಬ್ ದೇಸಾಯಿ ಹಾಗೂ ಶಿವಮೊಗ್ಗ ವಿವಿಯ ಡಾ. ಸಿ. ಸುನಿಲ್ ಅವರು ಆತ್ಮನಿರ್ಭರ್-2035 ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ವಿಷಯ ಮಂಡಿಸಲಿದ್ದಾರೆ.
ವಿದ್ಯಾರ್ಥಿಗಳಿಗೆ ಭಾಷಣ, ಚಿತ್ರಕಲೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದು, ಮೇ 17 ರಂದು ಸಂಜೆ ದೇವದಾಸ್ ಕಾಪಿಕಾಡ್ ತಂಡದಿಂದ ತುಳು ನಾಟಕ ‘ಮನಸ್ಕಾರ ಮಾಸ್ಟ್ರೇ’ ಮತ್ತು ಮೇ 18 ರಂದು ಇಂಚರ ಮೆಲೋಡೀಸ್ ತಂಡದಿಂದ ಸಂಗೀತ ಸಂಜೆ ನಡೆಯಲಿದೆ. 70ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗೇರು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಮನೆಗೊಂದು ಗೇರು ಅಭಿಯಾನ, ಉಚಿತ ಗೇರು ಜ್ಯೂಸ್ ಹಾಗೂ ರೈತರಿಗೆ ಉಚಿತ ಕಣ್ಣಿನ ತಪಾಸಣೆ ಇರಲಿದೆ ಎಂದರು.
ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ವತಿಯಿಂದ ಮೇ 17 ಮತ್ತು 18 ರಂದು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಗೇರು ಮೇಳ-2026 ಆಯೋಜಿಸಲಾಗಿದೆ ಎಂದು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ತಿಳಿಸಿದ್ದಾರೆ.
ಗೇರು ಕೃಷಿ ಸಾಧಕರಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ಗೇರು ಕೃಷಿಯಲ್ಲಿ ಸಾಧನೆ ಮಾಡಿದ ಪ್ರಶಸ್ತಿ ವಿಜೇತ ರೈತರಾದ ಕಡಮಜಲು ಸುಭಾಷ್ ರೈ, ವಿಶ್ವ ಕೇಶವ, ಶ್ರೀಕಾಂತ್ ಪೂಜಾರಿ, ಈಶ್ವರ್ ನಾಯ್ಕ, ಅನಂತ ಸೀತಾರಾಮ್ ಭಂಡಾರಿ, ಅಪ್ಸಲಿ ಸುರತ್ಕಲ್, ಪ್ರಕಾಶ್ ಬಂಟ್ವಾಳ್, ಸುಜಾತ ರೈ, ವಿಲ್ಮಾ ಉಳ್ಳಾಲ, ಪ್ರಜ್ಞಾ ಕುಮಾರ್ ಕಡಬ, ದಯಾನಂದ ಭಟ್, ವೇಲೆ ರೀಯನ್ ಡಿಸೋಜಾ ಬೆಳುವಾಯಿ ಹಾಗೂ ಕ್ಯಾನಟ್ ಮುಂತಾದ ಸಾಧಕ ಕೃಷಿಕರನ್ನು ಸನ್ಮಾನಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ತಿಳಿಸಿದ್ದಾರೆ.