ಕದ್ರಿ ಯುದ್ಧ ಸ್ಮಾರಕದಲ್ಲಿ ಟಿ-55 ಯುದ್ಧ ಟ್ಯಾಂಕ್ ಪ್ರದರ್ಶನಕ್ಕೆ ವೇದಿಕೆ ನಿರ್ಮಾಣ ಅಂತಿಮ ಹಂತದಲ್ಲಿದೆ.
ಮಂಗಳೂರು: ನಗರಕ್ಕೆ ವಿಶೇಷ ಆಕರ್ಷಣೆಯಾಗಿ ಭಾರತ-ಪಾಕಿಸ್ಥಾನ ವಿರುದ್ಧ 1965ಮತ್ತು 1971ರಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಬಳಕೆಯಾಗಿದ್ದ ಭಾರತೀಯ ಭೂಸೇನೆಯ ಯುದ್ಧ ಟ್ಯಾಂಕ್ ಟಿ-55 ಹಾಗೂ 303 ರೈಫಲ್ ಸಾರ್ವಜನಿಕ ಪ್ರದರ್ಶನಕ್ಕೆ ಕದ್ರಿ ಸರ್ಕೀಟ್ ಹೌಸ್ ಎದುರು ಯುದ್ಧ ಸ್ಮಾರಕದ ಬಳಿ ವೇದಿಕೆ ಸಿದ್ಧವಾಗಿದ್ದು, ಅಂತಿಮ ಕಾಮಗಾರಿ ನಡೆಯುತ್ತಿದೆ.
ವೀರ ಯೋಧರನ್ನು ಸ್ಮರಿಸುವ ಮತ್ತು ಸೇನೆಗೆ ಸೇರುವ ಯುವಕರಿಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಯುದ್ಧ ಟ್ಯಾಂಕ್‌ನ್ನು ಮಂಗಳೂರು ನಗರ ಮಧ್ಯದಲ್ಲಿ ಇರಿಸಬೇಕೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಟ್ಯಾಂಕ್‌ನ್ನು ಉಚಿತವಾಗಿ ನೀಡಲು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ರಕ್ಷಣಾ ಇಲಾಖೆ ಟ್ಯಾಂಕ್ ನೀಡಲು ಒಪ್ಪಿಗೆ ನೀಡಿತ್ತು. ಮಹಾನಗರ ಪಾಲಿಕೆ ಇದನ್ನು ತರುವ ಕೆಲಸ ಮಾಡಿತ್ತು.
ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿಯಾಗಿರುವ ಟ್ಯಾಂಕ್ ಮತ್ತಿತರ ಸೇನೆಯ ಆಯುಧಗಳನ್ನು ಯುದ್ಧ ಸ್ಮರಣಿಕೆ ರೀತಿಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಅದರಂತೆ ಕದ್ರಿ ಯುದ್ಧ ಸ್ಮಾರಕದ ಬಳಿಯಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ಮಾಣದ ಹೊಣೆಯನ್ನು ಹೊತ್ತಿದೆ. ಯುದ್ಧ ಟ್ಯಾಂಕರ್ ವೇದಿಕೆಯ ಸುತ್ತಲೂ ಸುಂದರಗೊಳಿಸಿ, ಗಾರ್ಡನಿಂಗ್ ಮಾಡಿ ಆಕರ್ಷಣೀಯಗೊಳಿಸಲಾಗುತ್ತಿದೆ. ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಸಮರ ಟ್ಯಾಂಕ್ ಲೋಕಾರ್ಪಣೆಗೆ ಸಜ್ಜುಗೊಳ್ಳಲಿದೆ.
40 ಟನ್ ತೂಕದ ಯುದ್ಧ ಟ್ಯಾಂಕ್
ಭಾರತೀಯ ಸೇನೆಯಲ್ಲಿ 1961ರಿಂದ 2001ರ ವರೆಗೆ ಸೇವೆಯಲ್ಲಿದ್ದ ಈ ಯುದ್ಧ ಟ್ಯಾಂಕರನ್ನು ಪುಣೆಯ ಕಿರ್ಕಿಯಲ್ಲಿರುವ ಭಾರತೀಯ ಸೇನೆಯ ಡಿಪೋದಲ್ಲಿ ಇರಿಸಲಾಗಿತ್ತು. ಬರೋಬ್ಬರಿ 40 ಟನ್ ತೂಕವಿರುವ ಟಿ-55 ಯುದ್ಧ ಟ್ಯಾಂಕ್ ವಿಶೇಷ ಟ್ರೈಲರ್‌ನಲ್ಲಿ ಪುಣೆಯಿಂದ ಕಳೆದ ಆಗಸ್ಟ್ ಮೊದಲ ವಾರದಲ್ಲಿ ತರಲಾಗಿತ್ತು.
ಸಮರ ಟ್ಯಾಂಕ್ ಪ್ರದರ್ಶನಕ್ಕೆ ಕದ್ರಿ ಯುದ್ಧ ಸ್ಮಾರಕದ ಬಳಿ ವೇದಿಕೆ ಸಿದ್ಧ ಮಾಡಲಾಗಿದೆ. ಇದರ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಇದರ ಲೋಕಾರ್ಪಣೆ ನಡೆಯಲಿದೆ. ಸೈನ್ಯಕ್ಕೆ ಸೇರುವವರಿಗೆ ಹಾಗೂ ದೇಶಪ್ರೇಮಿಗಳಿಗೆ ಈ ಯುದ್ಧ ಟ್ಯಾಂಕ್ ಪ್ರೇರಣೆಯಾಗಬೇಕು ಎಂಬುದು ಉದ್ದೇಶ.